ಮುಂದಿನ ಹಣಕಾಸು ವರ್ಷ ಎಂದರೆ ಏಪ್ರಿಲ್ 1, 2023 ರಿಂದ, ನಿಮ್ಮ ಪ್ಯಾನ್ ಕಾರ್ಡ್ ಸಂಖ್ಯೆಯನ್ನು ಆಧಾರ್ ಕಾರ್ಡ್ ಸಂಖ್ಯೆಯೊಂದಿಗೆ ಲಿಂಕ್ ಮಾಡದೇ ಹೋದರೆ ಪ್ಯಾನ್ ಹೊಂದಿರುವವರು ಅದನ್ನು ಮುಂದೆ ಬಳಸಲು ಸಾಧ್ಯವಾಗುವುದಿಲ್ಲವಂತೆ. ಗಡುವಿನ ನಂತರವೂ ಸಹ ಇವೆರಡನ್ನು ಲಿಂಕ್ ಮಾಡುವುದನ್ನು ನೀವು ಮರೆತರೆ ಅಥವಾ ನಿರ್ಲಕ್ಷ್ಯ ಮಾಡಿದರೆ, ಹತ್ತು ಅಂಕಿಗಳ ವಿಶಿಷ್ಟ ಆಲ್ಫಾನ್ಯೂಮೆರಿಕ್ ಸಂಖ್ಯೆ ನಿಷ್ಕ್ರಿಯಗೊಳ್ಳುವುದು ಗ್ಯಾರೆಂಟಿ ಅಂತ ಹೇಳಲಾಗುತ್ತಿದೆ.
ಇನ್ನೂ ಅನೇಕ ಮಂದಿ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡೇ ಇಲ್ಲ..
ದೇಶದ ಹೆಚ್ಚಿನ ಪ್ಯಾನ್ ಹೊಂದಿರುವವರು ಈಗಾಗಲೇ ತಮ್ಮ ತಮ್ಮ ಆಧಾರ್ ಕಾರ್ಡ್ ಸಂಖ್ಯೆಯೊಂದಿಗೆ ಲಿಂಕ್ ಮಾಡಿದ್ದರೆ, ಇನ್ನೂ ಅನೇಕರು ತಮ್ಮ ಪ್ಯಾನ್ ಅನ್ನು ತಮ್ಮ ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಿಯೇ ಇಲ್ಲ ಅಂತ ಹೇಳಬಹುದು. “ಆದಾಯ ತೆರಿಗೆ ಕಾಯ್ದೆ, 1961 ರ ಪ್ರಕಾರ, ವಿನಾಯಿತಿ ವರ್ಗಕ್ಕೆ ಸೇರದ ಎಲ್ಲಾ ಪ್ಯಾನ್ ಹೊಂದಿರುವವರು ಮಾರ್ಚ್ 31, 2023 ರ ಮೊದಲು ತಮ್ಮ ಪ್ಯಾನ್ ಅನ್ನು ಆಧಾರ್ ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ.
ಹೀಗೆ ಮಾಡದೆ ಇದ್ದಲ್ಲಿ, ಏಪ್ರಿಲ್ 1, 2023 ರಿಂದ ಲಿಂಕ್ ಮಾಡದ ಪ್ಯಾನ್ ಕಾರ್ಡ್ ಗಳು ನಿಷ್ಕ್ರಿಯಗೊಳ್ಳುತ್ತದೆ. ತುಂಬಾ ತಡವಾಗುವ ಮೊದಲು ಲಿಂಕ್ ಮಾಡಿ. ವಿಳಂಬ ಮಾಡಬೇಡಿ, ಇಂದೇ ಲಿಂಕ್ ಮಾಡಿ” ಎಂದು ತೆರಿಗೆ ಇಲಾಖೆ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ಪ್ಯಾನ್ ನಿಷ್ಕ್ರಿಯವಾದರೆ ಏನಾಗುತ್ತದೆ?
ತೆರಿಗೆ ಇಲಾಖೆ ನೀಡಿದ ಗಡುವಿನಲ್ಲಿ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡದೆ ಹೋದರೆ ಏನಾಗುತ್ತದೆ? ಪ್ಯಾನ್ ನಿಷ್ಕ್ರಿಯಗೊಂಡರೇ ಏನಾಗುತ್ತದೆ? ಅಂತೆಲ್ಲಾ ಕೇಳುವವರು ನಮ್ಮ ನಿಮ್ಮ ಮಧ್ಯೆ ಇದ್ದೇ ಇರುತ್ತಾರೆ.
ಹೀಗೆ ಪ್ಯಾನ್ ನಿಷ್ಕ್ರಿಯವಾದರೆ, ನಂತರ ಆ ವ್ಯಕ್ತಿಯು ಐಟಿ ರಿಟರ್ನ್ ಸಲ್ಲಿಸಲು ಸಾಧ್ಯವಾಗುವುದಿಲ್ಲ, ಬಾಕಿ ಇರುವ ರಿಟರ್ನ್ ಗಳನ್ನು ಪ್ರಕ್ರಿಯೆಗೊಳಿಸಲಾಗುವುದಿಲ್ಲ, ಬಾಕಿ ಇರುವ ಮರುಪಾವತಿಗಳನ್ನು ನೀಡಲು ಸಾಧ್ಯವಿಲ್ಲ, ದೋಷಯುಕ್ತ ರಿಟರ್ನ್ ಗಳ ಸಂದರ್ಭದಲ್ಲಿ ಬಾಕಿ ಇರುವ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದಿಲ್ಲ ಮತ್ತು ಹೆಚ್ಚಿನ ದರದಲ್ಲಿ ತೆರಿಗೆಯನ್ನು ಕಡಿತಗೊಳಿಸಬೇಕಾಗುತ್ತದೆ.
ಪ್ಯಾನ್ ಕಾರ್ಡ್ ಅನ್ನು ಆಧಾರ್ ನೊಂದಿಗೆ ಲಿಂಕ್ ಮಾಡುವುದು ಹೇಗೆ?
1.https://www.incometax.gov.in/iec/foportal/ ಗೆ ಭೇಟಿ ನೀಡಿ ಮತ್ತು ‘ಕ್ವಿಕ್ ಲಿಂಕ್ಸ್’ ವಿಭಾಗದಲ್ಲಿ, ‘ಲಿಂಕ್ ಆಧಾರ್’ ಆಯ್ಕೆಯನ್ನ ಕ್ಲಿಕ್ ಮಾಡಿ.
- ನಂತರ ನಿಮ್ಮ ಪ್ಯಾನ್ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ನಂತರ ‘ವ್ಯಾಲಿಡೇಟ್’ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಆಧಾರ್ ಮತ್ತು ಪ್ಯಾನ್ ಅನ್ನು ಈಗಾಗಲೇ ಲಿಂಕ್ ಮಾಡಿದ್ದರೆ, ‘ಪ್ಯಾನ್ ಈಗಾಗಲೇ ಆಧಾರ್ ನೊಂದಿಗೆ ಲಿಂಕ್ ಆಗಿದೆ’ ಎಂಬ ಸಂದೇಶವು ನಿಮ್ಮ ಸ್ಕ್ರೀನ್ ಮೇಲೆ ಗೋಚರಿಸುತ್ತದೆ.
- ಒಂದು ವೇಳೆ ನಿಮ್ಮ ಪ್ಯಾನ್ ಅನ್ನು ನಿಮ್ಮ ಆಧಾರ್ ಗೆ ಲಿಂಕ್ ಮಾಡದಿದ್ದರೆ ಮತ್ತು ನೀವು ಎನ್‌ಎಸ್‌ಡಿಎಲ್ ಪೋರ್ಟಲ್ ನಲ್ಲಿ ಚಲನ್ ಪಾವತಿಸಿದ್ದರೆ, ಪಾವತಿ ಮಾಹಿತಿಯನ್ನು ಎಲೆಕ್ಟ್ರಾನಿಕ್ ಫೈಲಿಂಗ್ ಮೂಲಕ ಮೌಲ್ಯೀಕರಿಸಲಾಗುತ್ತದೆ.
ಪ್ಯಾನ್ ಮತ್ತು ಆಧಾರ್ ದೃಢಪಡಿಸಿದ ನಂತರ “ನಿಮ್ಮ ಪಾವತಿ ವಿವರಗಳನ್ನು ಪರಿಶೀಲಿಸಲಾಗಿದೆ” ಎಂದು ಹೇಳುವ ಪಾಪ್-ಅಪ್ ಅಧಿಸೂಚನೆಯನ್ನು ನೀವು ಸ್ವೀಕರಿಸುತ್ತೀರಿ.
- ಅಗತ್ಯ ವಿವರಗಳನ್ನು ಹಾಕಿದ ನಂತರ, ‘ಲಿಂಕ್ ಆಧಾರ್’ ಆಯ್ಕೆಯನ್ನು ಕ್ಲಿಕ್ ಮಾಡಿ, ನಂತರ ನಿಮ್ಮ ಮೊಬೈಲ್ ಫೋನ್ ಸಂಖ್ಯೆಗೆ ಸ್ವೀಕರಿಸಿದ 6-ಅಂಕಿಯ ಒಟಿಪಿಯನ್ನು ಅಲ್ಲಿ ನಮೂದಿಸಿ.
- ಆಧಾರ್-ಪ್ಯಾನ್ ಲಿಂಕ್ ಮಾಡುವುದಕ್ಕಾಗಿ ನಿಮ್ಮ ವಿನಂತಿಯನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ, ನೀವು ಈಗ ಅದರ ಸ್ಥಿತಿಯನ್ನು ಪರಿಶೀಲಿಸಬಹುದು.
- ಇ-ಫೈಲಿಂಗ್ ಪೋರ್ಟಲ್ ನಲ್ಲಿ ಪಾವತಿ ವಿವರಗಳನ್ನು ದೃಢೀಕರಿಸದಿದ್ದರೆ ಮತ್ತು ಅವರು ಈಗಾಗಲೇ ಎನ್‌ಎಸ್‌ಡಿಎಲ್ ಪೋರ್ಟಲ್ ನಲ್ಲಿ ಮೊತ್ತವನ್ನು ಪಾವತಿಸಿದ್ದರೆ, ಪ್ಯಾನ್ ಹೊಂದಿರುವವರು ಲಿಂಕ್ ವಿನಂತಿಯನ್ನು ಸಲ್ಲಿಸುವ ಮೊದಲು 4-5 ದಿನಗಳವರೆಗೆ ಕಾಯಬೇಕಾಗುತ್ತದೆ.