Home Article ಸಂಜೆಯಾಗುತ್ತಿದ್ದಂತೆ ರಸ್ತೆಗೆ ಬರುವ ಕಾಡು ಹಂದಿಗಳು : ಶಾಲಾ ಮಕ್ಕಳು ಓಡಾಡುವ ಜಾಗದಲ್ಲಿ ವರಾಹಗಳ ಹಾವಳಿ

ಸಂಜೆಯಾಗುತ್ತಿದ್ದಂತೆ ರಸ್ತೆಗೆ ಬರುವ ಕಾಡು ಹಂದಿಗಳು : ಶಾಲಾ ಮಕ್ಕಳು ಓಡಾಡುವ ಜಾಗದಲ್ಲಿ ವರಾಹಗಳ ಹಾವಳಿ

ಕುಮಟಾ : ತಾಲೂಕಿನ ಬಗ್ಗೋಣ ಭಾಗದಲ್ಲಿ ಕಾಡು ಹಂದಿಗಳ ಕಾಟ ಜಾಸ್ತಿಯಾಗಿದ್ದು, ಜನರು ಇದರಿಂದ ಕಂಗಾಲಾಗಿದ್ದಾರೆ. ಬಗ್ಗೋಣ ಶಾಲೆಯ ಸನಿಹದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿರುವ ಮರದ ಪೊದೆಯಿಂದ ಒಮ್ಮೆಲೆ ರಸ್ತೆಗೆ ಧಾವಿಸಿಬರುವ ಹಂದಿಗಳಿಂದಾಗಿ ರಸ್ತೆಯಲ್ಲಿ ಓಡಾಡುವ ಬೈಕ್ ಸವಾರರೂ ಬಿದ್ದು ಎದ್ದು ಓಡಿದ ಘಟನೆ ನಡೆದಿದೆ.

ರಾಷ್ಟ್ರೀಯ ಹೆದ್ದಾರಿಯಿಂದ ನಾಮಧಾರಿ ಸಭಾಭವನವನ್ನು ದಾಟಿ ಊರುಕೇರಿಯ ಕಡೆಗೆ ಮುಂದರಿದು ಹೋಗುವ ಭಾಗದಲ್ಲಿ ಬಗ್ಗೋಣ ಶಾಲೆಗಿಂತ ಹಿಂದೆಯೇ ರಸ್ತೆಯ ಇಕ್ಕೆಲದಲ್ಲಿ ಬೆಳೆದಿರುವ ಕಗ್ಗಡಿನಂತಾದ ಗಿಡಗಂಟಿಗಳ ನಡುವಿನಿಂದಲೇ ಕಾಡು ಹಂದಿಗಳು ಬರುತ್ತಿದೆ. ಇಲ್ಲಿ ಸಾವಿರಾರು ಜನರು ನಿತ್ಯ ಓಡಾಟ ನಡೆಸುತ್ತಿದ್ದು, ಶಾಲಾ ಮಕ್ಕಳ ಓಡಾಟವೂ ಹೆಚ್ಚಿರುತ್ತದೆ.

ಇಲ್ಲಿಯ ಹಂದಿಗಳಿಗೆ ರಾತ್ರಿ ಆಗಬೇಕೆಂದೇನೂ ಇಲ್ಲ, ಮುಸ್ಸಂಜೆಯ ಸಮಯಕ್ಕೇ ಮೇಲಿನ ಗಿಡ ಗಂಟಿಗಳಿಂದ ಕೆಳಗೆ ಇಳಿದು ರಸ್ತೆ ದಾಟಿ ಓಡಾಟ ಪ್ರಾರಂಭಿಸುವ ಹಂದಿಗಳಿಂದಾಗಿ ಇಲ್ಲಿ ಓಡಾಡುವ ಪಾದಚಾರಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು ಅಪಾಯಕ್ಕೆ ಸಿಲುಕುವ ಸಂಭವವಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ತನ್ನ ಆಹಾರವನ್ನು ಅರಸಿ ಗುಡ್ಡದಿಂದ ಬರುವ ಕಾಡು ಹಂದಿಗಳು ಬಹಳ ವೇಗವಾಗಿ ರಸ್ತೆಯನ್ನು ದಾಟುತ್ತದೆ. ಕ್ಷಣ ಮಾತ್ರದಲ್ಲಿ ರಸ್ತೆಯನ್ನು ದಾಟುವ ಸಂದರ್ಭದಲ್ಲಿ ವಾಹನಗಳು ಅಡ್ಡ ಬಂದರೆ ವಾಹನ ಸವಾರರು ಬೀಳುವುದು ಖಚಿತ. ಅದಷ್ಟೇ ಅಲ್ಲದೆ ಹಿಂಡು ಹಿಂಡಾಗಿ ಇವು ಬರುವ ಕಾರಣದಿಂದ ಯಾರೇ ಅಡ್ಡ ಬಂದರೂ ಅವರನ್ನು ಸೀಳಿ ಮುನ್ನುಗುವ ಪ್ರವೃತ್ತಿಯಲ್ಲಿ ಇರುತ್ತದೆ. ಹೀಗಾಗಿ ಈ ರಸ್ತೆಯಲ್ಲಿ ಓಡಾಡುವುದೇ ಕಷ್ಟ ಎಂಬಂತಾಗಿದೆ.

ಆದರೆ ಈ ಬಗ್ಗೆ ಗಮನಹರಿಸಬೇಕಿದ್ದ ಪುರಸಭೆಯವರು ಹಾಗೂ ಅರಣ್ಯ ಇಲಾಖೆಯವರು ಇಲ್ಲಿ ಯಾವುದೇ ರೀತಿಯ ಗಿಡಗಂಟಿಗಳ ಕಟಾವು ಕಾರ್ಯ ಮಾಡದೆ ಹಿಂಡು ಹಿಂಡಾಗಿ ಅವುಗಳನ್ನು ಹಾಗೆ ಬಿಟ್ಟಿರುವುದು ಕಾಡು ಪ್ರಾಣಿಗಳು ಅದರಲ್ಲಿ ಬಂದು ಸೇರಿಕೊಳ್ಳಲು ಕಾರಣವಾಗಿದೆ. 

ಶಾಲೆ ಬಿಟ್ಟು ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಮನೆಗೆ ವಾಪಸ್ ಆಗುವ ಸಂದರ್ಭದಲ್ಲಿ ಹಂದಿಗಳು ಕಾಣಿಸಿಕೊಂಡು, ಭಯ ಹುಟ್ಟಿಸಿದ ಘಟನೆಗಳು ನಡೆದಿದೆ. ಅದಲ್ಲದೆ ಈ ದಾರಿಯಿಂದ ಕೆಳಗಿರುವ ಮನೆಗಳಲ್ಲಿ ಮನೆಯ ಎದುರಿನಲ್ಲಿಯೇ ಹಿಂಡು ಹಿಂಡು ಹಂದಿಗಳು ಕಾಣಿಸಿಕೊಂಡು ಮನೆಯಲ್ಲಿ ವಾಸವಾಗಿರುವವರ ಎದೆಯಲ್ಲಿ ನಡುಕ‌ ಹುಟ್ಟಿಸಿದೆ. ಹಂದಿಗಳ ಕೂಗಿದೆ ಮನೆಯವರೂ ಒಳಗೇ ಅವಿತುಕೊಂಡ ಘಟನೆಗಳೂ ಇವೆ ಎನ್ನುತ್ತಾರೆ ಸ್ಥಳೀಯರು.

ಇಲ್ಲಿಯ ಗಿಡಗಂಟಿಗಳನ್ನು ಸ್ವಚ್ಛ ಮಾಡಿ ಮುಂದಾಗಬಹುದಾದ ಬಹುದೊಡ್ಡ ಅಪಾಯವನ್ನು ತಪ್ಪಿಸಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

ಈ ಭಾಗದಲ್ಲಿ ಹಂದಿಗಳ ಗುಂಪು ಗುಂಪು ಇದ್ದು ಮಕ್ಕಳು ಓಡಾಡುವ ಸಮಯದಲ್ಲಿಯೂ ಹಂದಿಗಳು ರಸ್ತೆಯನ್ನು ದಾಟಿ ಓಡಿ ಬರುತ್ತದೆ. ಪುರಸಭೆಯವರು ಹಾಗೂ ಅರಣ್ಯ ಇಲಾಖೆಯವರು ಇಲ್ಲಿಯ ಗಿಡ ಗಂಟಿಗಳನ್ನು ಸ್ವಚ್ಛಮಾಡಿ ಮುಂದಾಗಬಹುದಾದ ಅಪಾಯ ತಪ್ಪಿಸಬೇಕಾಗಿದೆ. – ವಿ.ಜಿ ಹೆಗಡೆ ಬಗ್ಗೋಣ.

———

ಸ್ಥಳೀಯರಿಂದ ಈ ವರೆಗೆ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ಖಂಡಿತವಾಗಿಯೂ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಪುರಸಭೆಯ ಮುಖ್ಯಾಧಿಕಾರಿಗಳ ಜೊತೆಗೆ ಮಾತನಾಡಿ, ಸ್ಥಳ ವೀಕ್ಷಣೆ ಮಾಡಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. – ಸುಧಾಕರ ಪಟಗಾರ, ಆರ್.ಎಫ್.ಓ ಕುಮಟಾ.