ರುಚಿಯಾದ ಆಲೂ ಪರೋಟಾ ತಯಾರಿಸುವ ಸರಳ ವಿಧಾನ ಇಲ್ಲಿದೆ..

ಹೂರಣಕ್ಕೆ ಬೇಕಾಗುವ ಸಾಮಗ್ರಿಗಳು: ಬೇಯಿಸಿದ ಆಲೂಗೆಡ್ಡೆ-ಒಂದು ಬಟ್ಟಲು ಅಚ್ಚ ಖಾರದ ಪುಡಿ-ಕಾಲು ಚಮಚ ಉಪ್ಪು ರುಚಿಗೆ ತಕ್ಕಷ್ಟು ಚಾಟ್ ಮಸಾಲಾ-ಕಾಲು ಚಮಚ ಜೀರಿಗೆ ಪುಡಿ-ಅರ್ಧ ಚಮಚ ಧನಿಯ ಪುಡಿ – ಅರ್ಧ ಚಮಚ

ಕಣಕದ ಸಾಮಗ್ರಿಗಳು: ಮೈದಾಹಿಟ್ಟು ಚಿಟಿಕೆ ಅರಿಸಿನ ಕಾಲು ಚಮಚ ಉಪ್ಪು ಒಂದು ಚಮಚ ಡಾಲ್ಡ

ತಯಾರಿಸುವ ವಿಧಾನ: ಕಣಕಕ್ಕೆ ತಿಳಿಸಿರುವ ಸಾಮಗ್ರಿಗಳನ್ನು ಬೆರೆಸಿ, ಪೂರಿ ಹಿಟ್ಟಿನ ಹದಕ್ಕೆ ಕಲೆಸಿ, ಕಾಲು ಗಂಟೆ ನೆನೆಯಲು ಬಿಡಿ. ಬೇಯಿಸಿದ ಆಲೂಗೆಡ್ಡೆಯನ್ನು ಚೆನ್ನಾಗಿ ಹಿಸುಕಿ (ಮ್ಯಾಶ್), ಸಾಮಾನ್ಯವಾಗಿ ನುಣ್ಣಗೆ ಮಾಡಿಕೊಳ್ಳಿ, ಅದಕ್ಕೆ ಕಾರದಪುಡಿ, ಉಪ್ಪು,ಚಾಟ್ ಮಸಾಲಾ, ಜೀರಿಗೆ ಪುಡಿ ಮತ್ತು ಧನಿಯ ಪುಡಿಯನ್ನು ಹಾಕಿ ಎಲ್ಲವೂ ಚೆನ್ನಾಗಿ ಬೆರೆತು ಕೊಳ್ಳುವಂತೆ, ಕಲೆಸಿ, ಜೊತೆಗೆ ಒಂದೆರಡು ಚಮಚ ಎಣ್ಣೆಯನ್ನು ಹಾಕಿ ಸರಿಯಾಗಿ ಕಲೆಸಿ ಪುಟ್ಟ ಪುಟ್ಟ ಉಂಡೆ ತಯಾರಿಸಿಡಿ. ಕಣಕವನ್ನು ಚಿಕ್ಕ ಚಿಕ್ಕ ಉಂಡೆ ಮಾಡಿಕೊಳ್ಳಿ. ಒಂದೊಂದಾಗಿ ಚಿಕ್ಕ ಮೈದಾ ಹಿಟ್ಟಿನ ಉಂಡೆ ತೆಗೆದುಕೊಂಡು ಅದನ್ನು ಎಣ್ಣೆ ಹಚ್ಚಿದ ಪ್ಲಾಸ್ಟಿಕ ಹಾಳೆ/ಅಲ್ಯುಮಿನಿಯಂ ಫಾಯಿಲ್/ಬಾಳೆದೆಲೆಯ ಮೇಲೆ ಇಟ್ಟು ಚಿಕ್ಕ ಪೂರಿಯಂತೆ ಒತ್ತಿ ಅದರಲ್ಲಿ ಆಲೂ ಮಸಾಲ ಮಿಶ್ರಣವನ್ನು(ಹೂರಣವನ್ನು) ಇಟ್ಟು ಪೂರ್ತಿ ಕಣಕದಿಂದ ಮುಚ್ಚಿ.

RELATED ARTICLES  ಮಗುವಿನ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹ ನೀಡುವುದರಿಂದ ಸಂತೋಷವಾಗಿರುತ್ತಾರೆ.

ಕಣಕದಿಂದ ಆಲೂ ಮಸಾಲಾ ಮಿಶ್ರಣವನ್ನು (ಹೂರಣವನ್ನು) ಮುಚ್ಚಿ ತಯಾರಿಸಿದ ಉಂಡೆಗೆ ಎಣ್ಣೆ ಸವರಿಕೊಂಡು ಮೆಲ್ಲಗೆ ಪೂರಿಗಿಂತ ಸ್ವಲ್ಪ ದೊಡ್ಡದಾಗಿ ತಟ್ಟಿ {ದಪ್ಪ ಮತ್ತು ಅಳತೆ ನಿಮಗೆ ಬೇಕಾದಂತೆ ತಟ್ಟಿಕೊಳ್ಳಬಹುದು}, ಅದನ್ನು ಕಾದಿರುವ ತವಾ ಮೇಲೆ ಹಾಕಿ, ಎಣ್ಣೆ ಹಾಕಿ ಎರಡು ಬದಿ ಬೇಯಿಸಿ. ಚಪಾತಿ ತರಹ ಬೇಯಿಸಿ. ತೆಗೆಯಿರಿ, ಇದೇ ರೀತಿ ಮಿಕ್ಕ ಎಲ್ಲಾ ಉಂಡೆಗಳಿಂದ ಪರೋಟ ತಯಾರಿಸಿ. ಆಲೂಗೆಡ್ಡೆ ಪರೋಟ ತಿನ್ನಲು ತಯಾರಾಗುತ್ತದೆ.

RELATED ARTICLES  ಸರಳವಾಗಿ ತಯಾರಾಗುತ್ತೆ ಸಿಹಿಗೆಣಸು ಡೋನಟ್!

ಬೇಕೆನಿಸಿದರೆ ಚಟ್ನಿಯೊಂದಿಗೆ ಸರ್ವ್ ಮಾಡಬಹುದು. ಇಲ್ಲವೆಂದರೆ ಹಾಗೆ ತಿನ್ನಬಹುದು. ಮಕ್ಕಳು ಕೆಚಪ್ ಮತ್ತು ಸಾಸ್ ಜೊತೆ ಇಷ್ಟಪಡುತ್ತಾರೆ. ಇದನ್ನು ಮಕ್ಕಳಿಗೆ ಬಿಸಿಬಿಸಿಯಾಗಿ ಮಾಡಿಕೊಟ್ಟಾಗ ಖುಷಿಯಿಂದ ತಿನ್ನುತ್ತಾರೆ. ಇದರಲ್ಲಿ ಈರುಳ್ಳಿ ಉಪಯೋಗಿಸಿಲ್ಲ ಆಗಾಗಿ ಈರುಳ್ಳಿ ಸಿಗುತ್ತೆ ಅನ್ನುವಂತ ಮಕ್ಕಳಿಗೆ ಇದರಲ್ಲಿ ಈರುಳ್ಳಿ ಸಿಗದೇ ಇರುವುದರಿಂದ ತೊಂದರೆ ಇಲ್ಲದೆ ತಿನ್ನುತ್ತಾರೆ. ಕಾಯಿಚಟ್ನಿ ಜೊತೆ ತುಂಬಾ ಚೆನ್ನಾಗಿರುತ್ತದೆ. ಆಲೂಗೆಡ್ಡೆಯನ್ನು ಮ್ಯಾಶ್ ಮಾಡುವಾಗ ತುಂಬಾ ದಪ್ಪ ಬಿಟ್ಟರೆ,ಅದು ತಟ್ಟುವಾಗ ಹಿಟ್ಟಿನಿಂದ ಆಚೆ ಬರುತ್ತದೆ. ಅದಕ್ಕೆ ಸ್ವಲ್ಪ ಚೆನ್ನಾಗಿ ಮ್ಯಾಶ್ ಮಾಡಿ. ಪರೋಟ ಸ್ವಲ್ಪ ದಪ್ಪ ಬೇಕೆನಿಸಿದರೆ, ಹಿಟ್ಟು ಮತ್ತು ಹೂರಣವನ್ನು ಜಾಸ್ತಿ ತೆಗೆದುಕೊಂಡು ತಯಾರಿಸಿ. ತೆಳು ಅಥವ ದಪ್ಪ ಹೇಗೆ ತಯಾರಿಸಿದರು ಚೆನ್ನಾಗಿರುತ್ತದೆ.