Home Article ರಾಘವೇಶ್ವರ ಶ್ರೀಗಳ ವಿರುದ್ಧ ನಡೆಯುತ್ತಿದ್ದ ಷಡ್ಯಂತ್ರಕ್ಕೆ ಬ್ರೆಕ್!

ರಾಘವೇಶ್ವರ ಶ್ರೀಗಳ ವಿರುದ್ಧ ನಡೆಯುತ್ತಿದ್ದ ಷಡ್ಯಂತ್ರಕ್ಕೆ ಬ್ರೆಕ್!

ರಾಘವೇಶ್ವರ ಶ್ರೀಗಳ ವಿರುದ್ಧ ನಡೆಯುತ್ತಿದ್ದ ಷಡ್ಯಂತ್ರಕ್ಕೆ ಬ್ರೆಕ್, ತೀರ್ಪಿನಲ್ಲಿ ‘ಅದರ’ ಬಗ್ಗೆ ಹೇಳಿಲ್ಲ ಎಂದ ನ್ಯಾಯಾಲಯ….

ಬರವಣಿಗೆ : ಶಿಶಿರ ಅಂಗಡಿ.

ಶ್ರಿಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತಿ ಮಹಾಸ್ವಾಮಿಗಳವರ ವಿರುದ್ಧ ಹಿಂದಿನಿಂದಲೂ ನಡೆಯುತ್ತಿದ್ದ ಷಡ್ಯಂತ್ರಕ್ಕೆ ಇನ್ನೊಮ್ಮೆ ತೆರೆ ಬಿದ್ದಿದೆ. ರಾಘವೇಶ್ವರ ಶ್ರೀಗಳನ್ನು ಪೀಠದಿಂದ ಇಳಿಸಬೇಕು, ಅವಿಚ್ಛಿನ್ನ ಪರಂಪರೆಗೆ ಧಕ್ಕೆ ತರಬೇಕು ಎಂದು ಒಂದಿಲ್ಲೊಂದು ಅರ್ಜಿ – ದಾವೆಗಳ ಮೂಲಕ ನಡೆಯುತ್ತಿರುವ ಪ್ರಯತ್ನಗಳು ಸತತವಾಗಿ ವಿಫಲವಾಗುತ್ತಾ ಬಂದಿರುವುದು ನಮ್ಮೆಲ್ಲರ ಕಣ್ಮುಂದಿರುವಂತೆಯೇ, ಶ್ರೀಗಳ ವಿರುದ್ಧದ ಅತ್ಯಾಚಾರ ಆರೋಪದ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯ ನೀಡಿದ್ದ ಶ್ರೀಗಳು ನಿರಪರಾಧಿ ಎಂಬ ಸ್ಪಷ್ಟ ತೀರ್ಪನ್ನೆ ತಿರುಚುವ ಮೂಲಕ ಜನರ ಕಣ್ಣಿಗೆ ಮಣ್ಣೆರಚುತ್ತಾ, ಶ್ರೀಗಳು ಪೀಠದಲ್ಲಿ ಮುಂದುವರೆಯಲು ಅನರ್ಹರು, ಈ ಕೂಡಲೆ ಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಿಸುವ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೂಡಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನೂ ನ್ಯಾಯಾಲಯ ಸಾರಾಸಗಟಾಗಿ ತಿರಸ್ಕರಿಸಿದ್ದು ಷಡ್ಯಂತ್ರಿಗಳಿಗೆ ನುಂಗಲಾರದ‌ ತುತ್ತಾಗಿ ಪರಿಣಮಿಸಿದೆ.

ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸುಳ್ಳಿನ ಮೇಲೆ ಸುಳ್ಳನ್ನು ಹೆಣೆಯುತ್ತಾ, ಸುಳ್ಳನ್ನು ಸತ್ಯವೆಂದು ಬಿಂಬಿಸುತ್ತಾ, ಸತ್ಯವನ್ನು ತಿರುಚಿ‌ ನ್ಯಾಯಾಲಯದ ತೀರ್ಪಿಗೆ ಅಗೌರವ ತೋರುತ್ತಿದ್ದ ಷಡ್ಯಂತ್ರಿಗಳ ಸುಳ್ಳಿನೋಟಕ್ಕೆ ಬ್ರೇಕ್ ಬಿದ್ದಿದೆ ಎನ್ನಬಹುದು!

ಐದು ವರ್ಷ ರಾಜಕಾರಣ ಮಾಡುವವರು, ಕೆಲವು ವರ್ಷ ಅಧಿಕಾರದಲ್ಲಿ ಇರುವ ಅಧಿಕಾರಿಗಳು ಶ್ರೇಷ್ಠ ಪರಂಪರೆ ಇರುವ ಸಾವಿರಾರು ವರ್ಷಗಳಿಂದ ನಂಬಿಕೆ ಹಾಗೂ‌ ಸತ್ಯವನ್ನೇ ತಳಹದಿಯಾಗಿಸಿಕೊಂಡು ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಿರುವ ಗುರುಪೀಠವನ್ನು ತಮ್ಮ ಅಧಿಕಾರ ಬಲದಿಂದ ಏನು ಮಾಡಲೂ ಸಾಧ್ಯವಿಲ್ಲ! ಅಧಿಕಾರ ತಾತ್ಕಾಲಿಕವಾದದ್ದು, ಆದರೆ ಗುರುಪೀಠ ಅದು ಹಿಂದೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ. ಇದೇ ರಾಮಚಂದ್ರಾಪುರ ಮಠದ ಪರಂಪರೆ ಹುಟ್ಟಿದ ಮೇಲೆ ಅದೆಷ್ಟೊ‌ ಸಾಮ್ರಾಜ್ಯಗಳು ಹುಟ್ಟಿ‌ – ನಾಶವಾಗಿವೆ, ಎದ್ದು ಬಿದ್ದ ಸರ್ಕಾರಗಳು ಅದೆಷ್ಟೊ. ಆದರೆ ಈ ಶಂಕರ ಪರಂಪರೆ ಸ್ಥಿರವಾಗಿ ನಿಂತಿದೆ, ಮುಂದೆಯೂ ನಿಲ್ಲುತ್ತದೆ.

ರಾಘವೇಶ್ವರ ಶ್ರೀಗಳು ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ತೀರ್ಪಿನಲ್ಲಿ ಉಲ್ಲೇಖಿತವಾಗಿದೆ ಎಂದು ಬಿಂಬಿಸಿ ಸೆಕ್ಷನ್ ೯೨ ಸಿ.ಪಿ.ಸಿ ಅಡಿಯಲ್ಲಿ ಪ್ರಸ್ತುತ ಪ್ರಕರಣದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅತ್ಯಾಚಾರ ಪ್ರಕರಣವೇ ಸುಳ್ಳು, ಅದು ಮಿಥ್ಯಾರೋಪ, ಶ್ರೀಗಳ ಮಾನಹರಣಕ್ಕಾಗಿ ರೂಪಿಸಿದ ಪಿತೂರಿ, ದೂರುದಾರರ ಹೇಳಿಕೆಗಳಲ್ಲಿ ಏರುಪೇರು, ಇದರಲ್ಲಿ ಸರ್ಕಾರ ಮತ್ತು ತನಿಖಾ ಸಂಸ್ಥೆಗಳ ಪಾತ್ರವೂ ಇದೆ ಎಂದು ಸ್ಪಷ್ಟವಾಗಿ ಹೇಳಿದ ನ್ಯಾಯಾಲಯದ ತೀರ್ಪನ್ನೆ ಇವರು ತಮ್ಮ ಸ್ವಾರ್ಥಕ್ಕಾಗಿ ತಿರುಚಿ ಇನ್ನೊಂದು ಅರ್ಜಿ ಸಲ್ಲಿಸುತ್ತಿದ್ದಾರೆಂದರೆ ಇವರು ನ್ಯಾಯಾಲಯಕ್ಕೆ, ಸಂವಿಧಾನಕ್ಕೆ ಕೊಡುವ ಗೌರವ ಇದೇನಾ? ಇಂಥವರು ಅವಿಚ್ಛಿನ್ನವಾಗಿ ಸಾವಿರಾರು ವರ್ಷಗಳ ಪರಂಪರೆ ಇರುವ ರಾಮಚಂದ್ರಾಪುರ ಮಠಕ್ಕೆ ಬುದ್ಧಿಹೇಳಲು ಬರುವುದು ಹಾಸ್ಯಾಸ್ಪದ ಅಷ್ಟೇ ಅಲ್ಲ ಅನರ್ಥ ಕೂಡ.

ನ್ಯಾಯಾಲಯದ ಇವತ್ತಿನ ಆದೇಶ ರಾಘವೇಶ್ವರ ಶ್ರೀಗಳ ಕಳಂಕರಹಿತ ಚಾರಿತ್ರ್ಯವನ್ನು ನ್ಯಾಯಾಂಗ ವ್ಯವಸ್ಥೆ ಮತ್ತೊಮ್ಮೆ ಮಗದೊಮ್ಮೆ ಎತ್ತಿ ಹಿಡಿದಂತಾಗಿದೆ. ಶ್ರೀಗಳ ಘನತೆಗೆ ಧಕ್ಕೆ ತರುವ ದುರುದ್ದೇಶದಿಂದ ಮಿಥ್ಯಾರೋಪ ಸರಮಾಲೆಯನ್ನೇ‌ ಹೆಣೆಯುತ್ತಿರುವ ವಿರೋಧಿಗಳಿಗೆ ನ್ಯಾಯಾಲಯ ದಿಟ್ಟ ಉತ್ತರ ನೀಡಿದೆ. ನಂಬಿಕೆಯನ್ನು ಯಾವುದೇ ಸಂಪತ್ತು ಅಥವಾ ಅಧಿಕಾರದಿಂದ ನಾಶಮಾಡಲಾಗದು ಎಂಬುದು ಸ್ಪಷ್ಟವಾಗಿದೆ. ನ್ಯಾಯಕ್ಕೆ ಜಯ ಸಿಕ್ಕಿದೆ. ಶಪಥಪರ್ವದ ಸಾರ್ಥಕತೆಯನ್ನು ಲಕ್ಷಾಂತರ ಭಕ್ತರು ಅನುಭವಿಸುತ್ತಿದ್ದಾರೆ.

ಸಮಾಜವನ್ನು ಕತ್ತಲೆಯಲ್ಲಿ ಮುಳುಗಿಸಬೇಕೆಂದು ಹೆಣಗಾಡುತ್ತಿದ್ದವರಿಗೆ ನ್ಯಾಯಾಲಯ ದೀಪಾವಳಿಯ ಸಮಯದಂದೆ ಬೆಳಕಿನ ಪ್ರಖರತೆಯನ್ನು ಸಾರಿದೆ. ಅಂತೂ ಈ ದೀಪಾವಳಿ ನಮಗೆ ವಿಶೇಷಾತಿವಿಶೇಷ.‌