Home Article “ಸತ್ಯಮೇವ ಜಯತೆ ನಾ ಅನೃತಂ”

“ಸತ್ಯಮೇವ ಜಯತೆ ನಾ ಅನೃತಂ”

“ಸತ್ಯಮೇವ ಜಯತೆ ನಾ ಅನೃತಂ”ಎಂಬುದು ಲೋಕ ಪ್ರಸಿದ್ಧ ನುಡಿ. ಸತ್ಯ ಎಂದಿಗೂ ಸೋಲದು, ಸತ್ಯವಂತರು ಎಂದಿಗೂ ಗೆಲುವುಕಾಂಬರು ಎಂದುದಕ್ಕೆ ನಾವು ಹಿಂದಿನಿಂದಲೂ ಕೇಳುತ್ತ ಬಂದಿರುವ ಕಥೆಯೊಂದಿದೆ. ಆತ್ಮೀಯರೇ ಈ ಕಥೆ ನೀವು ಎಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಕೇಳುತ್ತಿರುವ ಕಥೆ. ಹೌದು ಸತ್ಯ ಸಂಧತೆಯ ಮೂರ್ತಿರೂಪವಾಗಿ ಜಗದಲ್ಲಿ ಅವತರಿಸಿದ ಗೋವಿನ ಕಥೆ ಇದು.ಇದುವೇ ಪುಣ್ಯಕೋಟಿಯ ಕಥೆ.ಇದೇನು ಹಳೇ ಕಥೆ ಇದಕ್ಕೇನೂ ಮಹತ್ವ ಇಲ್ಲ ಎಂದುಕೊಳ್ಳದಿರಿ.ಸತ್ಯದ ದಾರಿ ಕಾಣುವ ಈ ಕಥೆಯನ್ನು ಸ್ವಲ್ಪ ಹೊಸ ರೀತಿಯಲ್ಲಿ ಅಭಿವ್ಯಕ್ತಿ ಪಡಿಸುವ ಪ್ರಯತ್ನವನ್ನು ನಾನು ಮಡುತ್ತಿದ್ದೇನೆ. ಪ್ರಯತ್ನಕ್ಕೆ ಪರಿಸರವನ್ನು ಒದಗಿಸಿದ ನಿಮಗಿದೆ ಪ್ರಥಮ ಪ್ರಣಾಮಗಳು ಹಾಗೂ ನ್ಯಾಯ ಮೂರ್ತಿಗಳ ಸ್ವರೂಪಿ ನಿರ್ಣಾಯಕರಿಗೆ ನಮನಗಳು.

ಅಲ್ಲಿ ಮೂಡಣವು ಕೆಂಪೇರುತ್ತಿದೆ, ಸೂರ್ಯ ದಿಶೆಗೆ ಬೆಳಕೀಯುತ್ತಾ ಮುಂದುವರಿಯುತ್ತಿದ್ದಾನೆ..ಅಗೋ… ಅದೊಂದು ಊರು.. ಆ ಊರಾದರೋ ಪ್ರಕ್ರತಿ ಸೌಂದರ್ಯದ ಖಣಿ . ಆ ಊರಿನ ನಡುಮಧ್ಯ ಮಾಲಿಕನ ಕೊಟ್ಟಿಗೆಯಲ್ಲಿ ಮೇವಿನ ನೆನಪಲ್ಲಿ ಮೇಲೆದ್ದಿರುವ ಗೋವುಗಳು.ಅದರಲ್ಲಿ ಒಂದು ಗೋವು ಪುಣ್ಯಕೋಟಿ.ಬೆಳಗಿನ ಚುಮು ಚುಮು ಮಂಜಾವಿನಲ್ಲಿ ಮೇವನ್ನು ಅರಸಿ ಹೊರಡುವ ಮುನ್ನ ತನ್ನ ಕರುವನ್ನು ಮುದ್ದಾಡಿ ಹೊರಟಿದ್ದಾಳೆ ಆ ಮಾತೆ. ತನ್ನ ಕರುವನ್ನು ಆಲಿಂಗಿಸಿ ಹೇಳುತ್ತಿದ್ದಾಳೆ ಪುಣ್ಯಕೋಟಿ.

(ಹಾಡು)ಹಸಿದರೆ ಹಸಿ ಹುಲ್ಲಿನೆಸಳ ತಿನ್ನಲೆ ಕಂದ…
ತೃಷೆಗಾಗಿ ಬಾವಿ ನೀರಿಹುದೂ ಕಂದಾ….ತೃಷೆಗಾಗಿ ಬಾವಿ ನೀರಿಹುದು

ಹೀಗೆನ್ನುತ್ತಾ ಪುಟ್ಟ ಕಂದನನ್ನು ದೊಡ್ಡಿಯಲ್ಲಿಬಿಟ್ಟು ಹೊರಟಿದ್ದಾಳೆ ಪುಣ್ಯಕೋಟಿ. ಜಗತ್ತಿಗೆ ಸತ್ಯ ಸಂದತೆಯ ಪಾಠ ಸಾರಿದ ಪುಣ್ಯಕೋಟಿಯನ್ನೂ ಒಳಗೊಂಡಂತೆ ಅನೇಕ ಗೋವುಗಳನ್ನೂ ಸೇರಿಸಿಕೊಂಡು .ಮರದ ಕೆಳಗೆ ಕುಳಿತು ಗೋಪಾಲಕನು ಕೊಳಲನ್ನು ಊದುತ್ತಿದ್ದಾನೆ.ಗೋವುಗಳು ಮೇವನ್ನು ಅರಸುತ್ತಾ ಮೇಯುತ್ತಾ ಸಮಯಕಳೆಯುತ್ತಿವೆ. ಕರುವಿನ ನೆನಪಲ್ಲಿ ಹಸಿವನಿಂಗಿಸುವ ಭರದಲ್ಲಿ ಪುಣ್ಯಕೋಟಿ ಸ್ವಲ್ಪ ದೂರ ಮೇವರಸಿ ಬಂದುಬಿಟ್ಟಳು.. ಸಮಯ ಕಳೆದೇ ಹೋಯಿತು.. ಸೂರ್ಯ ನಡು ನೆತ್ತಿಯಿಂದ ಪಕ್ಕಕ್ಕೆ ಜಾರಿಬಂದ… ಗೋ ಪಾಲಕನೂ ಇನ್ನುಳಿದ ಗೋವಿನ ದಂಡೂ ಮನೆಯತ್ತ ಹೊರಟಿವೆ.ಆದರೆ ಪುಣ್ಯಕೋಟಿಗಿಂದು ಕಾಲ ಕಳೆದ ಪರಿವೇಯೇ ಇಲ್ಲ. ಸ್ವಲ್ಪ ಸಮಯ ತಡವಾದದ್ದನ್ನು ಅರಿತ ಪುಣ್ಯಕೋಟಿ ತನ್ನ ಕರುವನ್ನು ನೆನೆ ನೆನೆದು ಮನೆಯತ್ತಧಾವಿಸ ತೊಡಗಿತು.. ಮನೆಯ ದಾರಿ ಹಿಡಿದ ಆ ಹಸುವಿಗೆ

ಹಬ್ಬಿದಾ ಮಲೆ ಮಧ್ಯದೊಳಗೆ ..ಅರ್ಭುತಾನೆಂದೆಂಬ ವ್ಯಾರ್ಘನು ಅಬ್ಬರಿಸಿ ಹಸಿ ಹಸಿದು ಬೆಟ್ಟದ ಕಿಬ್ಬಿಯೊಳು ತಾನಿದ್ದನು..

ಹಸಿವಿನಿಂದ ಅಬ್ಬರಿಸುವ ಹುಲಿ…ಮಗುವಿನ ನೆನಪಿನಲ್ಲಿ ಮುಂದರಿದು ಬರುತ್ತಿರುವ ತಾಯಿ… ಅದೇನು ಸಂಕಷ್ಟ ದೇವರೇ …ವಿಧಿಯಾಟ.. ಹುಲಿಗೆ ಹಸುವಿನ ಬಾರೀ ಭೋಜನವೇ ದೊರೆತಿದೆ.. ಹಸಿದ ಹುಲಿ ನಿಲ್ಲು ಎಂಬುದಾಗಿ ಪುಣ್ಯಕೋಟಿಯನ್ನು ತಡೆದು ನಿಲ್ಲಿಸಿದೆ. ಹುಲಿಯ ಘರ್ಜನೆಯ ಭಯದಲ್ಲಿಯೇ ತನ್ನ ಕರುವನ್ನು ನೆನಪಿಸುತ್ತ ಪುಣ್ಯಕೋಟಿ ಹುಲಿಯ ಬಳಿ ಅಂಗಲಾಚುತ್ತಿದ್ದಾಳೆ. ಹುಲಿ ಸಿಕ್ಕ ಆಹಾರವನ್ನು ಬಿಡೆ ಬಿಡೆನು ಎನುತ್ತ ತನ್ನ ಘರ್ಜನೆಯನ್ನು ಇನ್ನೂ ಎತ್ತರಿಸಿದೆ.
ಮೇಲೆ ಬಿದ್ದು ನಿನ್ನ ಈಗಲೆ ತಿಂದು ಬಿಸಾಡುವೆ ಎಂಬುದಾಗಿ ಹುಲಿ ಪುಣ್ಯಕೋಟಿಯ ಮೇಲೇ ಎರಗಿ ಎರಗಿ ಬರುತ್ತಿದೆ. ಒಂದೆಡೆ ಕೊಟ್ಟಿಗೆಯಲ್ಲಿರುವ ಕರುವಿಗೆ ಹಾಲುಣಿಸುವ ತವಕ ಗೋವಿಗೆ.. ಹಸುವನ್ನು ತಿಂದು ತನ್ನ ಹಸಿವು ಇಂಗಿಸಿಕೊಳ್ಳುವ ತವಕ ಹುಲಿಗೆ …ಅದೆಂತಹ ಸಂಹಷ್ಟದ ಪರಿಸ್ಥಿತಿಯಲ್ಲಿಯೂ ಹುಲಿಗೆ ಹಸು ಭಾಷೆಯಿತ್ತು ಕಾಡಿ ಬೇಡುತ್ತಿದೆ. ಹಸಿದ ವೇಳೆಗೆ ಸಿಕ್ಕ ಆಹಾರ ಬಿಡೆ ಎನ್ನುತ್ತಾ ಕೂಗುತ್ತಿರುವ ಹುಲಿಗೆ ತನ್ನ ವಸ್ಥು ಸ್ಥಿತಿಯ ಅರಿವು ಮಾಡಿಸುತ್ತಿದ್ದಾಳೆ ಗೋಮಾತೆ.
ಹೇ ಹುಲಿರಾಯ ಪುಟ್ಟ ಕರು ನಿನ್ನಂತೆಯೇ ಹಸಿದಿದ್ದಾಳೆ ..ಹಸಿವು ನಿನಗಾದರೋ ಸ್ವಲ್ಪ ತಡೆಯುವಷ್ಟು ಬಲ ನಿನಗಿದೆ..ಆ ಕರು ಪುಟ್ಟ ಕರು ..ಕರುವಿಗೆ ಮೊಲೆಯಿತ್ತು ಮತ್ತೆ ಬಂದು ಸೇರುತ್ತೇನೆ ನನ್ನನ್ನು ಬಿಡು ಎಂದು ಅಂಗಲಾಚಿದ್ದಾಳೆ ಪುಣ್ಯಕೋಟಿ. ಆದರೆ ಹುಲಿ ಪುನರಾರೋಪಿಸಿತು ನಿನ್ನ ಜೊಳ್ಳು ನುಡಿಗೆ ಜೋತು ಬೀಳುವನು ನಾನಲ್ಲ ..ಒಳ್ಳೆ ಬೇಟೆಯ ನಾನು ಬಿಡೆ ,ಬಿಡೆ, ಬಿಡೆ….. ಹೀಗೆಂದಾಗಲೂ ಪುಣ್ಯಕೋಟಿ ದುಖಿತವಾಗಿ ಹೇಳುತ್ತಿದೆ ನಾನು ಕೊಟ್ಟ ಮಾತಿಗೆ ತಪ್ಪಲಾರೆನು…

ಹೇ ಹುಲಿರಾಯ..

(ಹಾಡು) ಸತ್ಯವೇ ನಮ್ಮ ತಾಯಿ ತಂದೆ ..ಸತ್ಯವೇ ನಮ್ಮ ಬಂಧು ಬಳಗ …
ಸತ್ಯ ವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು… ಮೆಚ್ಚನಾ ಪರಮಾತ್ಮನು… ಮೆಚ್ಚನಾ ಪರಮಾತ್ಮನು…

ಹಸಿವಿನ ನೋವನ್ನು ಅರಿತ ಹುಲಿಯ ಅಭಿಪ್ರಾಯ ಬದಲಾಗಬಹುದೆಂದು ಗೋವು ಮತ್ತೆ ಮುಂದುವರಿಸುತ್ತೆ

(ವಚನ)ಮಾತೇನು ಜಾರುವ ಜೊಲ್ಲಲ್ಲ…ಗೋ ಮಾತೆ ಎಂಬರು ಮಾತು ಸುಳ್ಳಲ್ಲ….
ಮಾತೆಂದರದುವೇ ದೈವದ ರೂಪ….ಕೊಟ್ಟ ಮಾತು ತಪ್ಪಿದರೆ ನಾರಕ ಕೂಪ…

ಹೀಗೆನ್ನುವ ಮೂಲಕ ಹುಲಿಗೆ ಭಾಷೆಯಿತ್ತು ತಾಯಿ ಗೋವು .ಹುಲಿಯಿಂದ ಒಪ್ಪಿಗೆ ಪಡೆದು…ತನ್ನ ಕರುವಿನ ಹತ್ತಿರ ಧಾವಿಸಿ ಬಂದಿದೆ..ಕೊಟ್ಟಿಗೆ ಸೇರಿ ತನ್ನ ಕರುವನ್ನು ಎಂದಿಗಿಂತ ಹೆಚ್ಚು ಮುದ್ದಿಸುತ್ತಿದ್ದಾಳೆ ಪುಣ್ಯಕೋಟಿ… ನೆಕ್ಕುತ್ತಿದ್ದಾಳೆ ಕರುವನ್ನು …ಕರುವಿಗೆ ಬೇಗನೆ ಹಾಲು ಕುಡಿಯುವಂತೆ ಸೂಚಿಸುತ್ತಿದ್ದರೆ..ಕರು ಪ್ರಶ್ನೆ ಮಾಡಿತು…ಏನು ಇದು ಎಂಬುದಾಗಿ… ಕರುವಿಗೆ ನಡೆದ ಸಂಗತಿಯನ್ನು ತಿಳಿಸಿದ್ದಾಳೆ ತಾಯಿ.. ಕರು ಮಾತೃವಿಯೋಗದ ನೋವಿನಲ್ಲಿದ್ದರೆ ಸತ್ಯದ ಮಾರ್ಗವನ್ನೇ ಯೋಚಿಸುತ್ತಿದ್ದಾಳೆ ತಾಯಿ..ಹುಲಿಗೆ ಪ್ರಾಣವ ನೀಡಲೋಸುಗ ತೆರಳಲು ಅಣಿಯಾಗಿದ್ದಾಳೆ ಪುಣ್ಯಕೋಟಿ.. ತನ್ನ ಕರುವಿಗೆ ಮುಂದೇನು ಎಂಬುದನ್ನು ಕ್ಷಣದಲ್ಲಿ ಚಿಂತಿಸಿದ ಪುಣ್ಯಕೋಟಿ ಸುತ್ತಲ ಹಸುಗಳಿಗೆ ಹೇಳುತ್ತಿದ್ದಾಳೆ

ಹೇ… ನನ್ನ ಒಡ ಹುತ್ತಿದವರೇ…
ಹಿಂದೆ ಬಂದರೆ ಒದೆಯ ಬೇಡಿ.. ಮುಂದೆ ಬಂದರೆ ಹಾಯ ಬೇಡಿ.. ಕಂದ ನಿಮ್ಮವನೆಂದು ಕಾಣಿರಿ ತಬ್ಬಲಿಯನೀ ಮಗುವನು…

ಅಳುವ ಕಂದನ ಕಣ್ಣೊರೆಸಿ ಕೊಟ್ಟ ಮಾತನ್ನು ನೆನಪಿಸುತ್ತ ಹೊರಟಿದ್ದಾಳೆ ತಾಯಿ ಪುಣ್ಯಕೋಟಿ..

(ಹಾಡು) ಸತ್ಯವೇ ನಮ್ಮ ತಾಯಿ ತಂದೆ ..ಸತ್ಯವೇ ನಮ್ಮ ಬಂಧು ಬಳಗ …
ಸತ್ಯ ವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು… ಮೆಚ್ಚನಾ ಪರಮಾತ್ಮನು… ಮೆಚ್ಚನಾ ಪರಮಾತ್ಮನು…

ಮತ್ತೆ ಹುಲಿಯ ಗುಹೆಯ ಬಾಗಿಲು ಸೇರುತ್ತಿದ್ದಾಳೆ ಆ ಪುಣ್ಯಕೋಟಿ.. ಖಂಡವಿದೇಕೆ ಮಾಂಸ ವಿದೇಕೆ ಬಾ ಹುಲಿರಾಯ ಭೋಗಿಸು ..ಹಸಿವ ಇಂಗಿಸಿಕೋ………… ಎಂಬುದಾಗಿ ಹುಲಿರಾಯನ್ನು ಕರೆದಿದೆ ಆ ತಾಯಿ…. ಹುಲಿ ರಾಯ ಸಂಪನ್ನ ಹಸು ತನ್ನನ್ನು ಕರೆದಿದ್ದು ಕೇಳಿ ಆಶ್ಚರ್ಯ ಚಕಿತನಾಗಿ ನಿಂತಿದ್ದಾನೆ …ಸತ್ಯ ಸಂದತೆಯ ಸಾಕಾರ ಮೂರ್ತಿಯನ್ನು ನೋಡಿ ಕಣ್ಣು ಕಣ್ಣೀರಿನಿಂದ ತುಂಬಿಹೋಗಿದೆ. ಸತ್ಯ ವೃತಕ್ಕೆ ಮತ್ತೆ ನನ್ನೊಡಲಿಗೆ ಬಂದ ಇಂತಹ ತಾಯ ತಿಂದರೆ ನಿಜವಾಗಿಯೂ ನನಗೆ ಪಾಪ ಬರುವುದೆಂದು ಗಣಿಸಿ ಗುಡ್ಡದ ತುತ್ತ ತುದಿಯ ಬಂಡೆಯನ್ನೇರಿದೆ ಹುಲಿ….ಸತ್ಯ ವಾಕ್ಯ ಪರಿ ಪಾಲನೆಗೆ ನಿಂತ ಹಸುವನ್ನು ನೋಡಿ ಗದ್ಗದಿತವಾಗಿ ಗೋ… ಎನ್ನುತ್ತ ಅಳುತ್ತಾ ಮಾತೇ ಪುಣ್ಯ ಕೋಟಿ ನೀನೇ ದೈವ ವೆನ್ನುತ್ತಾ ಹಾರಿ ನೆಗೆದಿದೆ…. ಕೆಳಗೆ ಬಿದ್ದು ತನ್ನ ಜೀವ ಬಿಡುತ್ತದೆ ಆ ಹುಲಿ ಎಂಬಲ್ಲಿಗೆ…

ಇದೋ ಸತ್ಯ ಸಂದತೆಗೆ ಸಿಕ್ಕಿದೆ ಗೆಲುವು ..ಕೊಟ್ಟ ಮಾತಿಗೆ ತಪ್ಪದಿರೆ ಎಲ್ಲವೂ ಒಳಿತಾಗುವುದೆಂಬ ಭಾವನೆ ಜಗತ್ತಿನ್ನಲ್ಲಿ ಸ್ಥಿರವಾಗಿ ಉಳಿಸಿದ ಈ ಕಥೆ ಜಗತ್ತಿಗೇ ಸತ್ಯದ ಮಾರ್ಗ ತೋರುವುದೂ..

ಸತ್ಯ ವಾಕ್ಯಕ್ಕೆ ತಪ್ಪಿ ನಡೆಯದಂತೆ ತತ್ವ ನೀಡುವ ಕಥಾನಕ ಪುಣ್ಯ ಕೋಟಿಯ ಕಥೆ ಇದು..

ಸತ್ಯ ಮಾರ್ಗ ನಮ್ಮ ಬದುಕಿಗೂ ಬರಲಿ..ಸತ್ಯ ನಮ್ಮ ಜೀವನಾಂಶವಾಗಲಿ..ಸತ್ಯ ವಾಕ್ಯಕ್ಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು ಎನ್ನೋಣ..ಕಥೆ ಮಂಗಲವಾದರೂ ನಿತ್ಯ ಸತ್ಯದ ಬೆಳಕು ಕಾಣಲಿ..

ಎಲ್ಲರಿಗೂ ಧನ್ಯವಾದಗಳು….