ಒಬ್ಬಟ್ಟಿನ ಘಮಕ್ಕೆ, ಅದರ ರುಚಿಗೆ ಮರುಳಾಗದವರಿಲ್ಲ. “ನಾವ್‌ ಹೋಗಿದ್ದಾಗ ಅವರ ಮನೇಲಿ ಒಬ್ಬಟ್‌ ಮಾಡಿದ್ರು. ಎಷ್ಟ್ ರುಚಿಯಿತ್ತು ಗೊತ್ತಾ..?’ ಎಂದು ಅವರಿವರು ಹೇಳುವುದನ್ನು ನಾವೆಲ್ಲಾ ಕೇಳಿದ್ದೇವೆ. ಇಂಥ ರುಚಿರುಚಿ ಒಬ್ಬಟ್ಟಿನಲ್ಲೂ ಹಲವು ವರೈಟಿಗಳಿವೆ. ಹಾಗಾದ್ರೆ ಬನ್ನಿ, ಒಬ್ಬಟ್ಟಿನ ಹಿಂದೆ ಒಂದು ಸುತ್ತು ಹಾಕೋಣ.

1. ತೊಗರಿ ಬೇಳೆ ಒಬ್ಬಟ್ಟು.
ಬೇಕಾಗುವ ಸಾಮಗ್ರಿ: ತೊಗರಿ ಬೇಳೆ ಒಂದು ಕಪ್‌ ಅಥವಾ ಒಂದು ಪಾವು. ತೆಂಗಿನ ಕಾಯಿ ತುರಿ ಒಂದು ಕಪ್‌. ಬೆಲ್ಲ ಒಂದರಿಂದ ಒಂದೂವರೆ ಕಪ್‌. ಏಲಕ್ಕಿ ಸ್ವಲ್ಪ. ಚಿರೋಟಿ ರವೆ ಅಥವಾ ಮೈದಾ ಹಿಟ್ಟು ಕಾಲು ಕೆ.ಜಿ. ಚಿಟಿಕೆ ಉಪ್ಪು. ತುಪ್ಪ ಎರಡು ಚಮಚ. ಅರಿಸಿನ ಪುಡಿ ಅರ್ಧ ಚಮಚ. ಹಿಟ್ಟು ಕಲಸಿಕೊಳ್ಳಲು ನೀರು. ಬೇಯಿಸಲು ತುಪ್ಪ ಅಥವಾ ಎಣ್ಣೆ.

ಮಾಡುವ ವಿಧಾನ: ಬೇಳೆಯನ್ನು ಮೃದುವಾಗುವವರೆಗೆ ಬೇಯಿಸಿ. ಬೆಲ್ಲವನ್ನು ಒಂದೆಳೆ ಪಾಕ ಮಾಡಿ. ಕಲ್ಲು, ಕಸ ಇರದಂತೆ ಅದನ್ನು ಜರಡಿಯಲ್ಲಿ ಶೋಧಿಸಿಕೊಳ್ಳಿ. ಬೇಳೆಯ ನೀರು ಜಾಸ್ತಿ ಇದ್ದರೆ ಬಸಿದುಕೊಳ್ಳಿ. ನಂತರ ಗ್ರೈಂಡರ್‌ನಲ್ಲಿ ಬೇಳೆ, ತೆಂಗಿನ ಕಾಯಿ ತುರಿ, ಏಲಕ್ಕಿ ಕರಗಿಸಿ ಶೋಧಿಸಿದ ಬೆಲ್ಲ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಉಂಡೆ ಪಾಕ ಬರುವವರೆಗೆ ಸಣ್ಣ ಉರಿಯಲ್ಲಿ ಮಗುಚಿ. ನಂತರ ಅರಲು ಬಿಡಿ.

ಕಣಕ ಮಾಡುವ ವಿಧಾನ: ಚಿಟಿಕೆ ಉಪ್ಪು, ತುಪ್ಪ ಎರಡು ಚಮಚ, ಅರಿಸಿನ ಪುಡಿ, ರವೆ ಅಥವಾ ಮೈದಾ ಎಲ್ಲಾವನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಸ್ವಲ್ಪ ಸ್ವಲ್ಪ ನೀರನ್ನು ಸೇರಿಸಿ ಮೃದುವಾಗಿ ನಾದಿಕೊಳ್ಳಿ. ಈ ಹಿಟ್ಟನ್ನು ಚಪಾತಿ ಹಿಟ್ಟಿನ ಹದಕ್ಕೆ ಕಲಸಿ.ಗಟ್ಟಿ ಇರಬಾರದು. ಇದನ್ನು ಒಂದು ಗಂಟೆ ಕಾಲ ಒ¨ªೆ ಬಟ್ಟೆಯಿಂದ ಮುಚ್ಚಿಡಿ. ನಂತರ ಹಿಟ್ಟನ್ನು ಮೃದುವಾಗಿ,ಹಿಗ್ಗುವಂತೆ ನಾದಿಕೊಳ್ಳಿ.

ನಂತರ ಅದರ ಮೇಲೆ ಎಣ್ಣೆ ಹಾಕಿ. ಹಿಟ್ಟು ಎಣ್ಣೆಯನ್ನು ಹೀರಿಕೊಳ್ಳುವ ತನಕ ನಾದಿ.ಚೆನ್ನಾಗಿ ಕಲಸಿ. ನಾದಿಕೊಳ್ಳಲು ಅರ್ಧ ಕಪ್‌ ಎಣ್ಣೆ ಬೇಕಾದೀತು. ಇದನ್ನು ಮೂರು ಗಂಟೆ ಮುಚ್ಚಿಡಿ. ಬೇಳೆಯ ಮಿಶ್ರಣವನ್ನು ನಿಂಬೆ ಗಾತ್ರದ ಉಂಡೆಗಳನ್ನಾಗಿ ಮಾಡಿ. ಮೈದಾ ಹಿಟ್ಟನ್ನು ಸಮ ಅಳತೆಯ ಉಂಡೆ ಮಾಡಿ. ಮೈದಾ ಹಿಟ್ಟನ್ನು ಚಪ್ಪಟೆ ಅಗಿಸಿ ಅದರಲ್ಲಿ ಹೂರಣವನ್ನು ತುಂಬಿ. ಹೂರಣವನ್ನು ಮೈದಾ ಹಿಟ್ಟಿನಿಂದ ಮುಚ್ಚಿ.

ಈ ಉಂಡೆಗಳನ್ನು ದಪ್ಪದಾದ ಪ್ಲಾಸ್ಟಿಕ್‌ ಶೀಟ್‌ ಅಥವಾ ಬಾಳೆ ಎಲೆಯಲ್ಲಿ ತಟ್ಟಿಕೊಳ್ಳಿ. ಹದ ಸರಿ ಇದ್ದರೆ ಲಟ್ಟಣಿಗೆಯಿಂದ ತೆಳುವಾಗಿ ಲಟ್ಟಿಸಿಕೊಳ್ಳಬಹುದು. ಇದನ್ನು ಒಂದು ತವಾದಲ್ಲಿ ಮಧ್ಯಮ ಉರಿಯಲ್ಲಿ ಬೇಯಿಸಿ. ಎರಡು ಕಡೆ ತುಪ್ಪ ಅಥವಾ ಎಣ್ಣೆ ಹಾಕಿ ಬೇಯಿಸಿ. ಬಿಸಿಬಿಸಿ ಒಬ್ಬಟ್ಟನ್ನು ತುಪ್ಪದ ಜೊತೆಗೆ ತಿಂದರೆ ತುಂಬಾ ರುಚಿಯಾಗಿರುತ್ತದೆ.

2. ಖೋವಾ ಒಬ್ಬಟ್ಟು
ಬೇಕಾಗುವ ಸಾಮಗ್ರಿ: ಖೋವಾ ಒಂದು ಕಪ್‌/ ಸಕ್ಕರೆ ರಹಿತ. ಮೈದಾ ಒಂದೂವರೆ ಟೀ ಚಮಚ. ಪುಡಿ ಮಾಡಿದ ಸಕ್ಕರೆ, ಸಿಹಿ ಎಷ್ಟು ಬೇಕು ಅಷ್ಟು. ಪಚ್ಚ ಕರ್ಪೂರ ಚಿಟಿಕೆ.

ಮಾಡುವ ವಿಧಾನ: ಮೈದಾವನ್ನು ಪರಿಮಳ ಬರುವವರೆಗೆ ಹುರಿದುಕೊಳ್ಳಿ. ಬಿಸಿ ಮಾಡಿದ ಮೈದಾ ಪೂರ್ತಿ ತಣ್ಣಗಾದ ನಂತರ ಪುಡಿಮಾಡಿ ಕೊಂಡ ಖೋವಾ, ಸಕ್ಕರೆ ಪುಡಿ, ಏಲಕ್ಕಿ ಪುಡಿ, ಪಚ್ಚ ಕರ್ಪೂರ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಒಬ್ಬಟ್ಟಿಗೆ ಹೂರಣದ ಉಂಡೆಗಳನ್ನು ಮಾಡಿ, ಕಣಕದ ಒಳಗೆ ತುಂಬಿಸಿ,ಒಬ್ಬಟ್ಟುಗಳಾಗಿ ತಟ್ಟಿ ತವಾದಲ್ಲಿ ಬೇಯಿಸಿ. (ಕಣಕ ತೊಗರಿ ಬೇಳೆ ಒಬ್ಬಟ್ಟಿನಲ್ಲಿ ಹೇಳಿದ ರೀತಿ ತಯಾರಿಸಿ)

3. ಕಾಯಿ ಒಬ್ಬಟ್ಟು
ಬೇಕಾಗುವ ಸಾಮಗ್ರಿ: ತೆಂಗಿನಕಾಯಿ ತುರಿ ಎರಡು ಕಪ್‌ ಅಥವಾ ಒಂದು ತೆಂಗಿನಕಾಯಿ. ಬೆಲ್ಲದ ಪುಡಿ ಒಂದು ಕಪ್‌. ನೆನೆಸಿಕೊಂಡ ಅಕ್ಕಿ ಒಂದು ಟೀ ಚಮಚ. ಏಲಕ್ಕಿ ಎರಡರಿಂದ ಮೂರು. ಹುರಿಗಡಲೆ ಪುಡಿ ಎರಡು ಟೀ ಚಮಚ.

ಮಾಡುವ ವಿಧಾನ: ತೆಂಗಿನಕಾಯಿಯ ಬಿಳಿ ಭಾಗವನ್ನು ಮಾತ್ರ ತುರಿದುಕೊಳ್ಳಿ. ತೆಂಗಿನಕಾಯಿ ತುರಿ, ಬೆಲ್ಲ, ಏಲಕ್ಕಿ ಹಾಗೂ ಅಕ್ಕಿಯನ್ನು ಒಂದು ಮಿಕ್ಸಿಯಲ್ಲಿ ಅಥವಾ ಗ್ರೈಂಡರ್‌ನಲ್ಲಿ ನೀರು ಹಾಕದೆ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಬಾಣಲೆಯನ್ನು ಒಲೆಯ ಮೇಲಿಟ್ಟು ರುಬ್ಬಿದ ಮಿಶ್ರಣವನ್ನ ಹಾಕಿ ಚೆನ್ನಾಗಿ ಕೈಯಾಡಿಸಿ. ಅದು ಉಂಡೆ ಕಟ್ಟುವ ಹದ ಬಂದಾಗ ಹುರಿಗಡಲೆ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ ಒಲೆಯಿಂದ ಕೆಳಗಿಳಿಸಿ. ಉಂಡೆಗಳನ್ನು ಮಾಡಿ ಕಣಕದ ಒಳಗೆ ಹಾಕಿ ಒಬ್ಬಟ್ಟಾಗಿ ತಟ್ಟಿ ತವದಲ್ಲಿ ಬೇಯಿಸಿ. ರುಚಿಯಾದ ಕಾಯಿ ಒಬ್ಬಟ್ಟು ಮಾಡಿ ನೋಡಿ.

4. ಹಾಲಿನ ಪುಡಿ ಒಬ್ಬಟ್ಟು
ಬೇಕಾಗುವ ಸಾಮಗ್ರಿ: ತೆಂಗಿನಕಾಯಿ ತುರಿ ಒಂದು ಕಪ್‌. ಹಾಲಿನ ಪುಡಿ ಅರ್ಧ ಕಪ್‌. ಸಕ್ಕರೆ ಅರ್ಧ ಕಪ್‌ (ಪುಡಿ ಮಾಡಿದ್ದು). ಬೆರೆಸಲು ಸ್ವಲ್ಪ ಹಾಲು.

ಮಾಡುವ ವಿಧಾನ: ಮೇಲೆ ಹೇಳಿದ ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ಎಷ್ಟು ಹಾಲು ಬೇಕೋ ಅಷ್ಟು ಹಾಕಿ ಉಂಡೆ ಕಟ್ಟುವ ಹದ ಮಾಡಿಕೊಳ್ಳಿ. ಈ ಹೂರಣವನ್ನು ಕಣಕದ ಒಳಗಿಟ್ಟು, ಒಬ್ಬಟ್ಟಾಗಿ ಲಟ್ಟಿಸಿ ತವಾದಲ್ಲಿ ಬೇಯಿಸಿ. ಹಬ್ಬದ ಸ್ಪೆಷಲ… ಎಂದು ಮಾಡುವಾಗ ಒಮ್ಮೆ ಹಾಲಿನ ಪುಡಿ ಒಬ್ಬಟ್ಟು ಮಾಡಿ ನೋಡಿ.