ಕಬಾಬ್ ಅಂದಾಕ್ಷಣ ಸಸ್ಯಾಹಾರಿಗಳು ಮೂಗು ಮುರಿಯುತ್ತಾರೆ. ಯಾಕೆಂದರೆ ಕಬಾಬ್ ಅಂದ್ರೆ ಚಿಕನ್, ಚಿಕನ್ ಅಂದ್ರೆ ಕಬಾಬ್… ನಮಗೆ ಸಾಮಾನ್ಯವಾಗಿ ಅರಿವಿಗೆ ಬರುವುದು ಇಷ್ಟೇ. ಆದರೆ ಸಸ್ಯಹಾರಿ ಮತ್ತು ಮಾಂಸಾಹಾರಿಗಳೂ ಇಷ್ಟ ಪಡುವ ಆರೋಗ್ಯಕರ ಮತ್ತು ರುಚಿಕರವಾದ ಕಲ್ಮಿ ಕಬಾಬ್ ಹೇಗೆ ಮಾಡಬಹುದು ಎಂದು ತಿಳಿದುಕೊಳ್ಳೋಣ ಬನ್ನಿ;
ಬೇಕಾಗುವ ಪದಾರ್ಥಗಳು:
ತರಕಾರಿಗಳು (ಬೀನ್ಸ್, ಕ್ಯಾರೆಟ್, ಆಲೂಗಡ್ಡೆ, ಕ್ಯಾಬೇಜ್, ಬೀಟ್ ರೂಟ್)
ಈರುಳ್ಳಿ 01
ಶುಂಠಿ ಬೆಳ್ಳುಳ್ಳಿ ಪೇಸ್ಟ್ ಒಂದು ದೊಡ್ಡ ಚಮಚ
ಹಸಿಮೆಣಸಿನ ಕಾಯಿ 04
ಗರಮ್ ಮಸಾಲ 1/2 ಚಮಚ
ಜೀರಿಗೆ ಪುಡಿ 1/2 ಚಮಚ
ಬ್ಲಾಕ್ ಸಾಲ್ಟ್ 1/2 ಚಮಚ
ಖಾರದ ಪುಡಿ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
ತಂದೂರಿ ಪುಡಿ ಚಿಟಿಕೆ
ಬ್ರೆಡ್ ಪುಡಿ ಒಂದು ಕಪ್
ವುಡನ್ ಸ್ಟಿಕ್ಸ್ 06
ಎಣ್ಣೆ ಕರಿಯಲು
ಮೈದಾ 02 ದೊಡ್ಡ ಚಮಚ
ಮಾಡುವ ವಿಧಾನ:
ಎಲ್ಲಾ ತರಕಾರಿಗಳನ್ನು ಸಣ್ಣಗೆ ಹೆಚ್ಚಿ ಬೇಯಿಸಬೇಕು.
ನಂತರ ಒಂದು ಬಾಣಲೆಯಲ್ಲಿ 2 ದೊಡ್ಡ ಚಮಚ ಎಣ್ಣೆ ಬಿಸಿಮಾಡಿ.
ಅದಕ್ಕೆ ಕತ್ತರಿಸಿದ ಈರುಳ್ಳಿ, ಶುಂಠಿ, ಹಸಿಮೆಣಸಿನ ಕಾಯಿ, ಬೆಂದ ತರಕಾರಿ, ಬೆಳ್ಳುಳ್ಳಿ ಪೇಸ್ಟ್, ಉಪ್ಪು, ತಂದೂರಿ ಪೌಡರ್, 1/2 ಕಪ್ ಬ್ರೆಡ್ ಪುಡಿ ಸೇರಿಸಿ ಚೆನ್ನಾಗಿ ಬೇಯಿಸಿ.
ಈ ಮಿಶ್ರಣ ತಣ್ಣಗಾದ ನಂತರ ಚಿಕ್ಕ ಉಂಡೆಗಳನ್ನು ಮಾಡಿ, ಉದ್ದಕ್ಕೆ ಅಂಗೈಯಲ್ಲಿ ಉರುಳಿಸಿ ರೋಲ್ ನ ಆಕಾರಕ್ಕೆ ತರಬೇಕು.
ನಂತರ ಇದನ್ನು ಮೈದಾಹಿಟ್ಟಿನಲ್ಲಿ ಹೊರಳಿಸಿ, ಬ್ರೆಡ್ ಪುಡಿಯನ್ನೂ ಸುತ್ತಲೂ ಹಾಕಿ ಕಾದ ಎಣ್ಣೆಯಲ್ಲಿ ಕರಿಯಬೇಕು.
ತಯಾರಾದ ಕಲ್ಮಿ ಕಬಾಬ್ ಗೆ ಸ್ಟಿಕ್ ತೂರಿಸಿ, ಸವಿಯಲು ಕೊಡಿ.