Satwadhara News

Category: Food

  • ಇನ್ಸುಲಿನ್ ಎಲೆ ತಂಬುಳಿ

    ಇನ್ಸುಲಿನ್ ಎಲೆ ತಂಬುಳಿ

    ನಮ್ಮ ಮನೆಯಲ್ಲಿ ಇನ್ಸುಲಿನ್ ಗಿಡ ಬಹಳಷ್ಟು ಬೆಳೆದು ಸಾಕಷ್ಟು ಎಲೆಗಳಿವೆ. ಡಯಾಬಿಟಿಸ್ ರೋಗಿಗಳಿಗೆ ಇದು ತುಂಬಾ ಸಹಾಯಕವಾದ ಮದ್ದು.ಎಲೆ ಹುಳಿಯ ರುಚಿ ಹೊಂದಿದೆ. ನಾನು ಅದರ ತಂಬುಳಿ ಮಾಡೋಣವೆಂದು ಅಂದುಕೊಂಡೆ.

    ನಾಲ್ಕೈದು ಎಲೆ ತಂದು ತೊಳೆದು ಹೆಚ್ಚಿದೆ.ಬಾಣಲೆಯನ್ನು ಒಲೆ ಮೇಲಿಟ್ಟು ಸ್ವಲ್ಪ ಎಣ್ಣೆ ಹಾಕಿದೆ.ಅದಕ್ಕೆ ಜೀರಿಗೆ ಹಾಕಿ ಹುರಿದು ಸೊಪ್ಪು ಹಾಕಿ ಹುರಿದೆ. ಎಲೆಯ ಬಣ್ಣ ಬದಲಾಯಿತು.
    ಅದು ಸಂಪೂರ್ಣ ತಣಿದ ಮೇಲೆ ಮಿಕ್ಸಿ ಜಾರಿಗೆ ಹಾಕಿದೆ.ಜೊತೆ ಒಂದು ಚಿಕ್ಕ ಕಪ್ ಕಾಯಿತುರಿ ಒಂದು ಕಪ್ ಮೊಸರು ಹಾಕಿ ರುಬ್ಬಿದೆ.ಈಗ ತಂಬುಳಿ ಕಲ್ಕು ತಯಾರಾಯಿತು.ಅದಕ್ಕೆ ಸ್ವಲ್ಪ ನೀರು ಸೇರಿಸಿ ಸೋಸಿದೆ.ಬಂದ ರಸಕ್ಕೆ ಉಪ್ಪು ಸೇರಿಸಿದರೆ ಕುಡಿಯುವ ತಂಬುಳಿ ಅಗುತ್ತದೆ.ಸಾಸಿವೆ ಒಣಮೆಣಸು
    ಜೀರಿಗೆ ಇಂಗು ಒಗ್ಗರಣೆ ಮಾಡಿದರೆ ಅನ್ನದ ಜೊತೆ ಊಟ ಮಾಡಬಹುದು.ಅರೋಗ್ಯಕ್ಕೆ ತುಂಬಾ ಒಳ್ಳೆಯದು. ಮಾಡಿ ನೋಡಿ. ಸವಿಯ ಹೇಳಿ.

    ಕಲ್ಪನಾಅರುಣ
    ಬೆಂಗಳೂರು

  • ಇಂದಿನ ಅಹಾರ ಮತ್ತು ಅರೋಗ್ಯ

    ಇಂದಿನ ಅಹಾರ ಮತ್ತು ಅರೋಗ್ಯ

    ಅಹಾರ ಮಕ್ಕಳ ಬೆಳವಣಿಗೆಗೆ ಅತ್ಯವಶ್ಯ. ಅದರೆ ಈಗ ಅಹಾರ ಕ್ರಮ ಮೊದಲಿನಂತೆ ಇಲ್ಲ. ಬೆಳಗಾದರೆ ಗ್ರಹಿಣಿಯರು ಮನೆಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ತಿಂಡಿ ಮಾಡಬೇಕು. ಮಗನಿಗೆ ಮ್ಯಾಗಿ ಅತ್ತೆಗೆ ಶುಗರ್ ಗೆ ಗೋದಿ ದೋಸೆ. ಗಂಡನಿಗೆ ಅಕ್ಕಿ ದೋಸೆ. ಹೀಗೆ ಮನೆ ಹೊಟೆಲ್ ತರಹ ಅಗಿದೆ. ಇಂದಿನ ಮಕ್ಕಳಿಗೆ ಸಾಮಾನ್ಯವಾಗಿ ಶಕ್ತಿ ಕೊಡುವಂತಹ ಅರೋಗ್ಯಕರ ಅಹಾರ ಸೇರುವದಿಲ್ಲ. ಚಿಪ್ಸ. ಚಾಕಲೇಟ್. ಕುರುಕುರೆ. ಐಸ್ಕ್ರಿಂ. ಬೇಕರಿ ಪದಾರ್ಥ. ಕರಿದ ತಿಂಡಿಗಳು, ಪೀಜಾ, ಬರ್ಗರ್ ಹೀಗೆ ಬಾಯಿಗೆ ರುಚಿ ನೀಡುವ ಅಹಾರ ಬೇಕು. ಮನೆಯಲ್ಲಿ ಅಪ್ಪ ಒಣ ಹಣ್ಣು ತಂದು ಇಟ್ಟು ಮಗನ ಊಟದ ಬಾಕ್ಸಿಗೆ ಹಾಕಿ ಕಳುಹಿಸಿದರೆ ಅದು ವಾಪಸ್ ಬರಬಹುದು. ಅದರೆ ಚಿಪ್ಸ. ಕುರುಕುರೆ ಅದ್ರೆ ಖರ್ಚಾಗಿರುತ್ತದೆ. ಮೊದಲಿನ ತರಹ ದೋಸೆ, ಇಡ್ಲಿ ,‌ ಚಪಾತಿ ಇವೆಲ್ಲ ಬೇಡದವು. ಕಾರಣ ಮಕ್ಕಳು ಅಗಾಗ ಖಾಯಿಲೆ ಬಿದ್ದು, ಓದಿಗೆ ತೊಂದರೆ ಅಗುತ್ತದೆ. ನಾವು ಚಿಕ್ಕವರಿದ್ದಾಗ ಅಂಗಡಿಗೆ ದುಡ್ಡು ಹಾಕಿ ತಿನ್ನಬಾರದು ಎನ್ನುತ್ತಿದ್ದರು. ಅದರೆ ಈಗ ಅಪ್ಪ ಅಮ್ಮ ಸ್ವತಃ ತಾವೇ ಮಕ್ಕಳಿಗೆ ಬೇಕಾದ ತಿಂಡಿ ತಂದಿರುತ್ತಾರೆ. ಮಕ್ಕಳು ಮುದ್ದಿಗೆ ತಮಗಿಷ್ಟವಾದುದನ್ನು ಹಠ ಮಾಡಿ ತಿನ್ನುತ್ತಾರೆ. ಕಾರಣ ಇಂದು ಹೊಟೆಲ್ ಉದ್ಯಮ ಕೂಡ ಬೆಳೆದಿದೆ. ರಜಾ ಇದ್ದರೆ ಹೊಟೆಲ್ ಊಟ, ವಿಶೇಷ ದಿನವಿದ್ದರೆ ಹೊಟೆಲ್. ಮನೆ ಊಟ ಹಿಡಿಸದಿದ್ದರೆ ಹೊಟೆಲ್ ಹೀಗೆ ಹೊರಗಿನ ತಿಂಡಿ ತೀರ್ಥಗಳು ಮಕ್ಕಳಿಗೆ ದೊರೆತು ಮನೆಯ ರುಚಿಗೆ ಬಾಯಿ ಕೆಟ್ಟುಹೋಗುತ್ತಿದೆ. ಕಾರಣ ಬೊಜ್ಜು. ಹೊಟ್ಟೆ ನೋವು. ಶೀತ ಕಫ. ಅಷ್ಟಲ್ಲದೆ ಕೆಲವರಿಗೆ ಬಿಪಿ ಶುಗರ್ ಕೂಡ ಬಂದಿದೆ. ಮಕ್ಕಳು ಅರೋಗ್ಯವಾಗಿರಲು ಪೌಷ್ಟಿಕ ಅಹಾರ ಬೇಕು. ಸತ್ವಯುತ ಕಾಳು ಬೇಳೆ ತಿನ್ನಬೇಕು. ಹಾಲು ಹೈನು ಬೇಕು. ಮನೆಯಲ್ಲಿ ಹಸು ಕಟ್ಟಿ ಹಾಲು ಬೆಣ್ಣೆ ಮೊಸರು ತುಪ್ಪ ತಿಂದ ಜನ ಗಟ್ಟಿ. ಮನೆಯಲ್ಲಿ ಬೆಳೆದ ತರಕಾರಿ ತಿಂದ ಜನ ಇಂದಿಗೂ ಕೆಲಸ ಮಾಡುತ್ತಾರೆ.


    ಅದರೆ ಈಗ ಕಲುಷಿತ ಅಹಾರ ಅಪೌಷ್ಟಿಕ ಅಹಾರ ಅರೋಗ್ಯವನ್ನೇ ಕಿತ್ತುಕೊಂಡಿದೆ. ಮಾನಸಿಕವಾಗಿ ನೆನಪಿನ ಶಕ್ತಿ
    ಕಡಿಮೆಯಾಗಿದೆ. ಮಕ್ಕಳಿಗೆ ಓದಿನಲ್ಲಿ ಅಸಕ್ತಿ ಕಡಿಮೆಯಾಗಿ
    ಬೇರೆಬೇರೆ ವಿಷಯಗಳಿಗೆ ತಲೆ ಕೆಡಿಸಿಕೊಳ್ಳುತ್ತಾರೆ. ಅಹಾರದಲ್ಲಿ ತಂಪು. ರುಚಿ ಶುಚಿ ಸತ್ವ ಎಲ್ಲವೂ ಇದ್ದು ಅದು ಸಂಪೂರ್ಣ ತ್ರಪ್ತಿ ನೀಡಿ ಮನಸಿಗೆ ಸಂತೋಷ ಕೊಡಬೇಕು. ತಿನ್ನುವಾಗ ಅದರ ಸ್ವಾದ ವನ್ನು ಎಂಜಾಯ್ ಮಾಡಿರಬೇಕು. ಅಹಾರವು ಮನುಷ್ಯನ ಜೀವನ ಕ್ರಮಕ್ಕೆಅತ್ಯಗತ್ಯ ವಾದ ಪೂರಕ ಅಂಶ. ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತು ಸತ್ಯ,ಅರ್ಥಪೂರ್ಣ.ಅಲ್ಲವೇ!

    ಕಲ್ಪನಾಅರುಣ

  • ಕೆಲವು ಟಿಪ್ಸ

    ಕೆಲವು ಟಿಪ್ಸ

    ೧) ದೋಸೆ ತೆಗೆಯಲು ಕಷ್ಟ ಎನಿಸಿದರೆ ಈರುಳ್ಳಿ ಕತ್ತರಿಸಿ
    ಕಾವಲಿಗೆ ಉಜ್ಜಿರಿ
    ೨) ಕರಿಬೇವು ಅರೋಗ್ಯಕ್ಕೆ ಒಳ್ಳೆಯದು. ಪೂರ್ಣ ಪ್ರಮಾಣದ ಉಪಯೋಗ ಸಿಗಬೇಕೆಂದರೆ ಒಣಗಿಸಿ ಪುಡಿ ಮಾಡಿ ಪ್ರಿಜ್ ಲ್ಲಿ ಇಡಿ ಪುಡಿಯನ್ನು ಒಗ್ಗರಣೆಗೆ ಉಪಯೋಗಿಸಿ
    ೩) ಬೇಸಿಗೆ ಕಾಲದಲ್ಲಿ ದೇಹಕ್ಕೆ ತಂಪು ನೀಡುವ ಅಹಾರ ಸೇವಿಸಿ.


    ೪) ತೆಂಗಿನ ಕಾಯಿಯನ್ನು ತುರಿದು ಡಿ ಪ್ರೀಜರ್ ಲ್ಲಿ ಇಟ್ಟರೆ
    ಕೆಡುವದಿಲ್ಲ
    ೫) ಬೇಳೆ ಕಾಳುಗಳನ್ನು ಪ್ರಿಜ್ ಲ್ಲಿ ಇಟ್ಟರೆ ಹುಳ ಬರುವದಿಲ್ಲ
    ೬) ಮೀಡಿಯಂ ರವಾ ದೋಸೆ ಮಾಡುವಾಗ ಅದನ್ನು ಒಂದು ಸುತ್ತು ಮಿಕ್ಸಿಯಲ್ಲಿ ರುಬ್ಬಿದರೆ
    ದೋಸೆ ಚೆನ್ನಾಗಿ ಇರುತ್ತದೆ
    ೭) ಚಪಾತಿಗೆ ಹಿಟ್ಟು ಮುದ್ದೆ ಮಾಡಿದ ಮೇಲೆ ಸ್ವಲ್ಪ ಎಣ್ಣೆ ಸವರಿ ಮುಚ್ಚಿಟ್ಟರೆ ಚಪಾತಿ ಮ್ರದುವಾಗಿ ಬರುತ್ತದೆ
    ೮) ಬಾಳೆಹಣ್ಣು ಸೆಕೆಗೆ ಬೇಗ ಹಾಳಾಗುತ್ತದೆ ಬನ್ಸ ಇಡ್ಲಿ ದೋಸೆ ಮಾಡಿ ಖರ್ಚು ಮಾಡಬಹುದು
    ೯) ಕಾಮಕಸ್ತೂರಿ ಬೀಜ (ಪಲುಡಾ) ಬೇಸಿಗೆಗೆ ತಂಪು
    ಪಾನಕ ಮಾಡಿ ಕುಡಿಯಬಹುದು
    ೧೦) ಬೆಳಿಗ್ಗೆ ನಿಂಬೆ ಹಣ್ಣಿನ ಬಿಸಿ ನೀರು ಕುಡಿಯುವದರಿಂದ ಅರೋಗ್ಯಕ್ಕೆ ಅನುಕೂಲ ಅಂಶ
    ಪಡೆಯಬಹುದು

    ಕಲ್ಪನಾಅರುಣ
    ಬೆಂಗಳೂರು

  • ಘಮ್ಮೆನ್ನುವ ಸೌತೆಕಾಯಿ ಸಾಂಬಾರ್..!!

    ಘಮ್ಮೆನ್ನುವ ಸೌತೆಕಾಯಿ ಸಾಂಬಾರ್..!!


    ಸಾಮಾಗ್ರಿಗಳು :

    ಮಧ್ಯಮ ಗಾತ್ರದ ಸೌತೆಕಾಯಿ – 1 (ಸಣ್ಣದಾಗಿ ತುಂಡುಮಾಡಿಕೊಂಡಿದ್ದು) ,ಬೇಳೆ – 1 ಕಪ್ ಕಪ್ಪು ಬೀಜದ ಬೀನ್ಸ್ – 1 ಕಪ್ ,ಬೆಲ್ಲ – 2 ಚಮಚ ,ಅರಿಶಿನ – 1/4 ಚಮಚ,ಉಪ್ಪು ರುಚಿಗೆ ತಕ್ಕಷ್ಟು

    ಸಾಮಾಗ್ರಿಗಳು (ಸಾಂಬಾರ್ ಮಸಾಲೆಗಾಗಿ):

    ತುರಿದ ತೆಂಗಿನಕಾಯಿ – 2 ಕಪ್ಸ್ ,ಕೊತ್ತಂಬರಿ ಬೀಜ – 2 ಚಮಚ ,ಕೆಂಪು ಮೆಣಸು – 3, ಉದ್ದಿನ ಬೇಳೆ – 2 ಚಮಚ ,ಚನ್ನಾ ದಾಲ್ (ಕಡಲೆಬೇಳೆ)- 2 ಚಮಚ ,ಜೀರಿಗೆ – 1/2 ಚಮಚ ,ಮೆಂತೆ – 1/2 ಚಮಚ ,ಹುಣಸೇ ಹಣ್ಣು ಪೇಸ್ಟ್ – 2 ಚಮಚ ,ಕರಿಬೇವು – 1 ಎಸಳು ,ಇಂಗು – 1 ಚಿಟಿಕೆ ,ಅಡುಗೆಗೆ ಬೇಕಾದ ಎಣ್ಣೆ – 1ಚಮಚ

    ಸಾಮಾಗ್ರಿಗಳು (ಒಗ್ಗರಣೆಗಾಗಿ): ಕೆಂಪು ಮೆಣಸು – 1 ,ಮೆಂತೆ – 1 ಚಮಚ ,ಕರಿಬೇವು – 1 ಎಸಳು ,ಅಡುಗೆಗೆ ಬೇಕಾದ ಎಣ್ಣೆ – 1/2 ಚಮಚ

    ಮಾಡುವ ವಿಧಾನ :

    1. ಕಪ್ಪು ಬೀಜದ ಬೀನ್ಸ್ ಅನ್ನು ತೊಳೆದು ನೀರಿನಲ್ಲಿ ಮುಳುಗಿಸಿಡಿ, ರಾತ್ರಿಪೂರ್ತಿ ಹಾಗೆಯೇ ಇರಲಿ. ಮರುದಿನ ಬೆಳಗ್ಗೆ, ಪ್ರೆಶ್ಶರ್ ಕುಕ್ಕರ್‎ನಲ್ಲಿ ಬೇಯಿಸಿಕೊಳ್ಳಿ. 1 ವಿಶಲ್ ಬಂದ ನಂತರ ಸ್ಟವ್ ಆಫ್ ಮಾಡಿ.

    2. ನಂತರ ಅದನ್ನು ಪಕ್ಕದಲ್ಲಿರಿಸಿಕೊಳ್ಳಿ

    3. ತೊಗರಿ ಬೇಳೆಯನ್ನು ತೊಳೆದುಕೊಳ್ಳಿ ಮತ್ತು ಅರಿಶಿನ, ನೀರು ಹಾಗೂ ಸ್ವಲ್ಪ ಎಣ್ಣೆಯನ್ನು ಇದಕ್ಕೆ ಹಾಕಿ.

    4. ಇನ್ನು ತೊಗರಿ ಬೇಳೆಯನ್ನು ಪ್ರೆಶ್ಶರ್ ಕುಕ್ಕರ್‎ಗೆ ಹಾಕಿ ಮತ್ತು ಮೂರು ವಿಶಲ್ ಬರುವವರೆಗೆ ಬೇಯಿಸಿಕೊಳ್ಳಿ. ತೊಗರಿಬೇಳೆಯನ್ನು ಮೆತ್ತಗೆ ಮಾಡಿಕೊಳ್ಳದಿರಿ.

    5. ಈಗ, ಸೌತೆಕಾಯಿ ತುಂಡುಗಳನ್ನು ಹಾಕಿ, ಇದೇ ಕುಕ್ಕರ್‎ಗೆ ನೀರು ಮತ್ತು ಉಪ್ಪು ಹಾಕಿ ನಂತರ ಎರಡು ವಿಶಲ್ ಬರುವವರೆಗೆ ಬೇಯಿಸಿ. ಈಗ ಬೇಳೆ ಸಂಪೂರ್ಣವಾಗಿ ಮೆತ್ತಗಾಗುತ್ತದೆ.

    6. ಇನ್ನು ತಳ ಆಳವಿರುವ ಪಾತ್ರೆಯನ್ನು ಬಳಸಿಕೊಂಡು ಕೆಂಪು ಮೆಣಸು, ಉದ್ದಿನ ಬೇಳೆ, ಚನ್ನಾ ದಾಲ್ (ಕಡಲೆಬೇಳೆ), ಜೀರಿಗೆ, ಕೊತ್ತಂಬರಿ, ಮೆಂತೆ ಮತ್ತು ಇಂಗನ್ನು ಹುರಿದುಕೊಳ್ಳಿ. ಇದಕ್ಕೆ 1 ಚಮಚ ಎಣ್ಣೆಯನ್ನು ಮಾತ್ರ ಬಳಸಿ.

    7. ಈಗ ಹುರಿದ ಮಸಾಲೆ ಸಾಮಾಗ್ರಿಗಳನ್ನು ಎತ್ತಿಡಿ ಮತ್ತು ಎಲ್ಲವನ್ನೂ ಗ್ರೈಂಡರ್‎ಗೆ ಹಾಕಿಕೊಳ್ಳಿ. ತುರಿದ ತೆಂಗಿನ ತುರಿಯನ್ನು ಇತರ ಮಸಾಲೆಗೆ ಹಾಕಿಕೊಳ್ಳಿ.

    8. ನಿಧಾನವಾಗಿ ನೀರು ಬೆರೆಸಿಕೊಳ್ಳಿ. ಜಾಸ್ತಿ ನೀರನ್ನು ಹಾಕದಿರಿ.

    9. ಎಲ್ಲಾ ಸಾಮಾಗ್ರಿಗಳನ್ನು ಗ್ರೈಂಡ್ ಮಾಡಿಕೊಳ್ಳಿ ಮತ್ತು ದಪ್ಪ ಮಸಾಲೆ ಸಿದ್ಧಪಡಿಸಿ.

    10. ಪ್ರೆಶ್ಶರ್ ಕುಕ್ಕರ್‎ಗೆ ಇದನ್ನು ಸೇರಿಸಿಕೊಳ್ಳಿ ಇದರಲ್ಲಿ ಈಗಲೇ ತೊ‎ಗರಿಬೇಳೆ ಮತ್ತು ಸೌತೆಕಾಯಿ ಬೇಯಿಸಿರುತ್ತೀರಿ. ಕಪ್ಪು ಬೀನ್ಸ್ ಅನ್ನು ಕುಕ್ಕರ್‌ಗೆ ಸೇರಿಸಿಕೊಳ್ಳಿ

    11. ಸಾಕಷ್ಟು ಪ್ರಮಾಣದಲ್ಲಿ ನೀರು ಬೆರೆಸಿಕೊಳ್ಳಿ. ಇದಕ್ಕೆ ಬೆಲ್ಲ ಮತ್ತು ನೀರು ಹಾಕಿ.

    12. ಸಾಂಬಾರ್ ಅನ್ನು 10-15 ನಿಮಿಷಗಳ ಕಾಲ ಕುದಿಸಿ

    13. ಈಗ ಪ್ರತ್ಯೇಕ ಪಾತ್ರೆಯನ್ನು ತೆಗೆದುಕೊಂಡು, ಸ್ವಲ್ಪ ಎಣ್ಣೆ ಬಿಸಿ ಮಾಡಿಕೊಳ್ಳಿ ಮತ್ತು ಕೆಂಪು ಮೆಣಸು, ಮೆಂತೆ ಹಾಗೂ ಕರಿಬೇವನ್ನು ಇದಕ್ಕೆ ಸೇರಿಸಿಕೊಳ್ಳಿ. ನಿಮ್ಮ ಸಾಂಬಾರ್ ಸಿದ್ಧಗೊಂಡಾಗ, ಈ ಮಿಶ್ರಣದೊಂದಿಗೆ ಒಗ್ಗರಣೆ ಮಾಡಿಕೊಳ್ಳಿ.

    14. ನಿಮ್ಮ ಸೌತೆಕಾಯಿ ಸಾಂಬಾರ್ ಸಿದ್ಧಗೊಂಡಿದೆ. ಈಗ ಬಿಸಿ ಬಿಸಿ ಸಾಂಬಾರ್ ಅನ್ನು ಅನ್ನ, ಚಪಾತಿ ಮತ್ತು ದೋಸೆಯೊಂದಿಗೆ ಸೇವಿಸಬಹುದಾಗಿದೆ.


  • ಪೈನಾಪಲ್ ಅಥವಾ ಅನಾನಸ್ ಸಾಸಿವೆ..!!

    ಪೈನಾಪಲ್ ಅಥವಾ ಅನಾನಸ್ ಸಾಸಿವೆ..!!

    ನಮ್ಮ ಊರ ಕಡೆ ಹಿತ್ತಿಲಲ್ಲಿ ಬೆಳೆಯುವ ಹೆಚ್ಚಿನ ಎಲ್ಲ ಬಗೆಯ ತರಕಾರಿ, ಸೊಪ್ಪು ಮತ್ತು ಹಣ್ಣುಗಳಿಂದಲೂ ಒಂದಿಲ್ಲೊಂದು ಬಗೆಯ ಮೇಲೋಗರ ತಯಾರಿಸುತ್ತಾರೆ. ಜೂನ್ – ಜುಲೈ ತಿಂಗಳು ಧಾರಾಕಾರವಾಗಿ ಮಳೆ ಸುರಿಯುವಾಗ ಮಾವು, ಹಲಸು, ಪೈನಾಪಲ್ ಇತ್ಯಾದಿ ಹಣ್ಣುಗಳ ಅಬ್ಬರವೂ ಜೋರು. ಇವನ್ನು ಬಳಸಿ ಕಡುಬು, ಜ್ಯಾಮ್, ಹಲ್ವಾ, ಪಾಯಸ, ನೀರ್ಗೊಜ್ಜು, ಸಾಸಿವೆ, ಹೀಗೆ ಎಷ್ಟೊಂದು ಬಗೆಯ ಮೇಲೋಗರ, ಸಿಹಿತಿಂಡಿ ಗಳನ್ನು ತಯಾರಿಸಬಹುದು.

    ಬೇಕಾಗುವ ಸಾಮಗ್ರಿಗಳು:

    • ಸಿಪ್ಪೆ ತೆಗೆದು ಹೆಚ್ಚಿದ ಪೈನಾಪಲ್ – 1 1/4 ಕಪ್ 
    • ತೆಂಗಿನತುರಿ – 1/2 ಕಪ್ 
    • ಎಳ್ಳು – 1 1/4 ಟೀ ಸ್ಪೂನ್ 
    • ಸಾಸಿವೆ – 3/4 ಟೀ ಸ್ಪೂನ್ 
    • ಒಣಮೆಣಸು ಅಥವಾ ಹಸಿಮೆಣಸು – ಒಂದು ಚಿಕ್ಕ ಚೂರು 
    • ಅರಿಶಿನ – 1/4 ಟೀ ಸ್ಪೂನ್ 
    • ಉಪ್ಪು – 1/2 ಟೀ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು 
    • ಬೆಲ್ಲ / ಸಕ್ಕರೆ – 4 ಟೇಬಲ್ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು 
    • ನೀರು – ಅರ್ಧ ಕಪ್ 
    • ಮೊಸರು – ಅರ್ಧ ಕಪ್   

    ಒಗ್ಗರಣೆಗೆ: ಎಣ್ಣೆ (ತೆಂಗಿನೆಣ್ಣೆ ಉತ್ತಮ) – 1 ಟೀ ಸ್ಪೂನ್, ಸಾಸಿವೆ – 1 ಟೀ ಸ್ಪೂನ್  

    ತಯಾರಿಸುವ ವಿಧಾನ:

    • ಪೈನಾಪಲ್ ಚೂರುಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ಉಪ್ಪು, ಬೆಲ್ಲ, ಅರ್ಧ ಕಪ್ ನೀರು ಸೇರಿಸಿ ಮುಚ್ಚಳ ಮುಚ್ಚಿ ಬೇಯಿಸಿ. 5 ನಿಮಿಷ ಕುದಿಸಿ ಉರಿ ಆಫ್ ಮಾಡಿ, ಮಿಶ್ರಣ ತಣ್ಣಗಾಗಲು ಬಿಡಿ. 
    • ಪೈನಾಪಲ್ ಬೇಯಿಸಿದ ನೀರನ್ನು ಪ್ರತ್ಯೇಕವಾಗಿ ತೆಗೆದಿಡಿ. 
    • ತಣ್ಣಗಾದ ಪೈನಾಪಲ್ ಚೂರುಗಳನ್ನು ತೆಂಗಿನತುರಿ, ಎಳ್ಳು, ಸಾಸಿವೆ, ಮೆಣಸು, ಅರಿಶಿನದೊಡನೆ ನುಣ್ಣಗೆ ರುಬ್ಬಿ. ಪೈನಾಪಲ್ ಬೇಯಿಸಿದ ನೀರನ್ನೇ ರುಬ್ಬುವಾಗ ಬಳಸಿ. 
    • ರುಬ್ಬಿದ ಮಿಶ್ರಣಕ್ಕೆ ಅರ್ಧ ಕಪ್ ನಷ್ಟು ಮೊಸರು ಸೇರಿಸಿ, ರುಚಿ ನೋಡಿ ಉಪ್ಪು ಅಥವಾ ಸಿಹಿ ಬೇಕಿದ್ದರೆ ಸೇರಿಸಿ. ಮಿಶ್ರಣ ತುಂಬಾ ದಪ್ಪವೆನಿಸಿದರೆ ಸ್ವಲ್ಪ ನೀರು ಸೇರಿಸಿ. ಆದರೆ ತುಂಬಾ ತೆಳ್ಳಗಾದರೆ ಚೆನ್ನಾಗಿರುವುದಿಲ್ಲ. 
    • ಒಗ್ಗರಣೆ ಸೌಟಿನಲ್ಲಿ ಎಣ್ಣೆ ಬಿಸಿಮಾಡಿ ಸಾಸಿವೆ ಹಾಕಿ ಚಟಪಟ ಎಂದಾಗ ಅದನ್ನು ಸಾಸಿವೆ ರುಬ್ಬಿದ ಮಿಶ್ರಣಕ್ಕೆ ಸೇರಿಸಿದರೆ ರುಚಿಯಾದ ಪೈನಾಪಲ್ ಸಾಸಿವೆ ಅನ್ನದೊಡನೆ ಸವಿಯಲು ಸಿದ್ಧ! 

  • ನಾಲಿಗೆಗೆ ರುಚಿ, ದೇಹಕ್ಕೆ ಹಿತವಾದ ಕಾಳು ಮೆಣಸಿನ ಸಾರು ಮಾಡುವುದು ಬಲು ಸುಲಭ!!.

    ನಾಲಿಗೆಗೆ ರುಚಿ, ದೇಹಕ್ಕೆ ಹಿತವಾದ ಕಾಳು ಮೆಣಸಿನ ಸಾರು ಮಾಡುವುದು ಬಲು ಸುಲಭ!!.

    ಮೆಣಸಿನ ಕಾಳು ‘ಮಸಾಲೆಗಳ ರಾಜ‘ ಉಪಯೋಗಿಸಿ ಮಾಡಿದ ತಿಳಿ ಸಾರು   ಬಾಯಲ್ಲಿ ನೀರೂರಿಸುತ್ತದೆ. ನೆಗಡಿ  ಮತ್ತು ಗಂಟಲು ನೋವಿಗೆ ತ್ವರಿತ ಪರಿಹಾರವನ್ನು ನೀಡುತ್ತದೆ. ಮೆಣಸಿನ ಸಾರು/ ರಸಂ ತಯಾರಿಸುವುದು ತುಂಬಾ ಸುಲಭ. ಈ ಸಾರು ಮಕ್ಕಳಿಗೆ  ಮತ್ತು ವಯಸ್ಕರಲ್ಲಿ ಶೀತ ಮತ್ತು ಕೆಮ್ಮೆನ್ನು ಗುಣಪಡಿಸಲು  ಪರಿಹಾರವಾಗಿದೆ. 

    ಮೆಣಸಿನ ಸಾರುಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ,ರೋಗನಿರೋಧಕ ಶಕ್ತಿಯನ್ನು  ನಿರ್ಮಿಸಲು ಸಹಕಾರಿಯಾಗುತ್ತದೆ ಮತ್ತು ಮೊದಲ ಹಂತದಲ್ಲಿ ಜ್ವರ ,ಕೆಮ್ಮು, ಶೀತ ಗುಣಪಡಿಸಲು ಉತ್ತಮಪರಿಹಾರವಾಗಿದೆ. ಈ ರುಚಿಕರವಾದ ರಸಂ ಮಕ್ಕಳು ಅಥವಾ ವಯಸ್ಕರು  ಬೇಡ ಎಂದು ನಿರಾಕರಿಸುವುದಿಲ್ಲ .

    ಬೇಕಾಗುವ ಸಾಮಾನುಗಳು:
    1/2 ಚಮಚ ಕಾಳು ಮೆಣಸು 1 ಚ. ಜೀರಿಗೆ, ಬೆಲ್ಲದ ಪುಡಿ, 4 ಬೆಳ್ಳುಳ್ಳಿ ಎಸಳು, 1/4 ಚ.ಅರಸಿನ, 1ಚ. ಸಾಸಿವೆ, ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು, ನಿಂಬೆ ಗಾತ್ರದಷ್ಟು ಹುಣಸೆ ಹುಳಿ, 10ಎಸಳು ಬೇವಿನೆಲೆ, ಚಿಟಿಕಿ ಇಂಗು.
     
     
    ತಯಾರಿಸುವ ವಿಧಾನ :
    *ಮೊದಲಿಗೆ ಜೀರಿಗೆ ಮತ್ತು ಕಾಳು ಮೆಣಸನ್ನು ಕುಟ್ಟಿ ಪುಡಿ ಮಾಡಿಕೊಳ್ಳಿ.

    *ಹುಣಸೆ ಹಣ್ಣನ್ನು ಕಾಲು ಲೋಟ ಬಿಸಿ ನೀರಿನಲ್ಲಿ ಹತ್ತು ನಿಮಿಷ ನೆನೆಸಿ ಇಟ್ಟು, ಬಳಿಕ ಅದನ್ನು ಹಿಂಡಿ ರಸ ಬೇರ್ಪಡಿಸಿ ಇಟ್ಟುಕೊಳ್ಳಿ.

    *ನಾಲ್ಕು ಲೋಟ ನೀರು ಬಿಸಿ ಮಾಡಿ ಅದರಲ್ಲಿ ಜೀರಿಗೆ,ಕಾಳು ಮೆಣಸಿನ ಪುಡಿ,ಹುಣಸೆ ರಸ ,ಬೆಲ್ಲ ಹಾಕಿ ಕುದಿಸಿ.

    * ಒಗ್ಗರಣೆ ಸೌಟಿನಲ್ಲಿ ತುಪ್ಪ, ಸಾಸಿವೆ,ಅರಸಿನ, ಬೆಳ್ಳುಳ್ಳಿ ಹಾಕಿ ಬಿಸಿ ಮಾಡಿ, ಸಾಸಿವೆ ಚಟಪಟ ಸಿಡಿಯುತ್ತಿದ್ದಂತೆ ಇಂಗು,ಬೇವಿನೆಲೆ ಹಾಕಿ ಕಲಕಿ,

    *ಕುದಿಯುತ್ತಿರುವ ಕಾಳು ಮೆಣಸು, ಜೀರಿಗೆ ನೀರಿಗೆ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಲಕಿ

    *ಇನ್ನೂ ಎರಡು ನಿಮಿಷ ಕುದಿಸಿ,ಒಲೆ ಆರಿಸಿ. ನಾಲಿಗೆಗೆ ರುಚಿ, ದೇಹಕ್ಕೆ ಹಿತವಾದ ಕಾಳು ಮೆಣಸು-ಜೀರಿಗೆ ಸಾರು ಸವಿಯಬಹುದು..

  • ಆಹಾ..!! ಸುಲಭವಾಗಿ ಮಾಡಬಹುದಾದ ಬಿಸಿಬಿಸಿ  ಮಸಾಲ ಬ್ರೆಡ್.

    ಆಹಾ..!! ಸುಲಭವಾಗಿ ಮಾಡಬಹುದಾದ ಬಿಸಿಬಿಸಿ ಮಸಾಲ ಬ್ರೆಡ್.

    ಈ ಮಳೆಗಾಲದಲ್ಲಿ ಸಂಜೆ ಏನಾದರೂ ಬಿಸಿಬಿಸಿ, ಖಾರ ಖಾರವಾಗಿ ತಿನ್ನೋಣ ಎನ್ನಿಸುತ್ತದೆ. ಮನೆಯಲ್ಲಿ ಬ್ರೆಡ್ ಇದ್ದರೆ ಸುಲಭವಾಗಿ ಸಿಂಪಲ್ ಆಗಿರುವ ಮಸಾಲ ಬ್ರೆಡ್ ಮಾಡಿ ಸವಿಯಬಹುದು.

    ಬೇಕಾಗುವ ಸಾಮಾಗ್ರಿಗಳು :

    1. ಕಡ್ಲೆಹಿಟ್ಟು – ಒಂದೂವರೆ ಕಪ್
    2. ಅಕ್ಕಿಹಿಟ್ಟು – 1 ಕಪ್
    3. ಖಾರದ ಪುಡಿ – 2 ಚಮಚ
    4. ಉಪ್ಪು – ರುಚಿಗೆ ತಕ್ಕಷ್ಟು
    5 ಕೊತ್ತಂಬರಿ ಸೊಪ್ಪು- ಸ್ವಲ್ಪ
    6. ಎಳ್ಳು – 2 ಚಮಚ
    7. ಎಣ್ಣೆ- ಕರಿಯಲು
    8. ಬ್ರೆಡ್ ಸ್ಲೈಸ್ – 8

    ಮಾಡುವ ವಿಧಾನ:

    * ಒಂದು ಬೌಲ್‍ಗೆ ಜರಡಿ ಹಿಡಿದ ಕಡ್ಲೆಹಿಟ್ಟು, ಅಕ್ಕಿ ಹಿಟ್ಟು, ಉಪ್ಪು, ಖಾರದ ಪುಡಿ, ಕೊತ್ತಂಬರಿ ಸೊಪ್ಪು, ಎಳ್ಳು, 2 ಚಮಚ ಎಣ್ಣೆ ಮತ್ತು ನೀರು ಹಾಕಿ ಬೊಂಡಾ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
    * ಹಿಟ್ಟು ತೀರಾ ತೆಳುವಾಗಿರಬಾರದು, ಸ್ವಲ್ಪ ಗಟ್ಟಿಯಾಗಿರುವಂತೆ ಕಲಸಿ.
    * ನಂತರ ಬ್ರೆಡ್ ಸ್ಲೈಸ್‍ನ 2 ಭಾಗಕ್ಕೆ ಕಲಸಿದ ಹಿಟ್ಟನ್ನು ಸ್ವಲ್ಪ ಹಾಕಿ.
    * ನಂತರ ಅದನ್ನು ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವವರೆಗೆ ಕರಿಯಿರಿ.
    * ಸಾಸ್ ಅಥವಾ ಕೆಚಪ್ ಜೊತೆ ಸವಿಯಿರಿ.
    * ಬೇಕಿದ್ದರೆ ಕಲಸಿದ ಹಿಟ್ಟಿಗೆ ಬೇಯಿಸಿದ ಆಲೂಗಡ್ಡೆ ಮ್ಯಾಶ್ ಮಾಡಿ ಮಿಕ್ಸ್ ಮಾಡಿಕೊಳ್ಳಬಹುದು. ಜೊತೆಗೆ ತುರಿದ ಕ್ಯಾರೆಟ್, ಬೇಯಿಸಿದ ಬಟಾಣಿ,ಸಣ್ಣಗೆ ಹೆಚ್ಚಿದ ಎಲೆಕೋಸು, ಕ್ಯಾಪ್ಸಿಕಮ್ ಇತರೆ ತರಕಾರಿಗಳನ್ನು ಮಿಕ್ಸ್ ಮಾಡಿಕೊಳ್ಳಬಹುದು.

  • ಸುಲಭವಾಗಿ ಮನೆಯಲ್ಲಿಯೇ ಮಾಡಿ ಸವಿಯರಿ ಮಸಾಲ ಸ್ವೀಟ್ ಕಾರ್ನ್..!!

    ಸುಲಭವಾಗಿ ಮನೆಯಲ್ಲಿಯೇ ಮಾಡಿ ಸವಿಯರಿ ಮಸಾಲ ಸ್ವೀಟ್ ಕಾರ್ನ್..!!

    ಮಕ್ಕಳು ಸಂಜೆ ವೇಳೆ ಏನಾದರೂ ಸ್ನ್ಯಾಕ್ಸ್ ತಿನ್ನಲು ಕೇಳುತ್ತಿರುತ್ತಾರೆ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಮಸಾಲ ಸ್ವೀಟ್ ಕಾರ್ನ್ ಅಂದರೆ ಇಷ್ಟ ಪಡುತ್ತಾರೆ. ಆಗ ಮನೆಯಲ್ಲಿ ಜೋಳ ಇದ್ದರೆ ಸುಲಭವಾಗಿ ಕಡಿಮೆ ಸಮಯದಲ್ಲಿ ಮಸಾಲ ಸ್ವೀಟ್ ಕಾರ್ನ್ ಮಾಡಿಕೊಡಿ. ಇದು ಆರೋಗ್ಯಕ್ಕೂ ಉತ್ತಮವಾಗಿದೆ. ಮಸಾಲ ಸ್ವೀಟ್ ಕಾರ್ನ್  ಮಾಡುವ ಸುಲಭ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    1. ಸ್ವೀಟ್ ಕಾರ್ನ್(ಜೋಳ) – 1 ಕಪ್
    2. ಖಾರದ ಪುಡಿ – 1/4 ಚಮಚ
    3. ಚಾಟ್ ಮಸಾಲ ಪುಡಿ – 1/4 ಚಮಚ
    4. ಮೆಣಸಿನ ಪುಡಿ – 1/4 ಚಮಚ
    5. ನಿಂಬೆಹಣ್ಣು – 1/4 ಚಮಚ
    6. ಕೊತ್ತಂಬರಿ ಸೊಪ್ಪು – ಸ್ವಲ್ಪ
    7. ಬೆಣ್ಣೆ – 1 ಚಮಚ
    8. ಉಪ್ಪು – ರುಚಿಗೆ ತಕ್ಕಷ್ಟು
    9. ಅರಿಶಿಣ – ಚಿಟಿಕೆ

    ಮಾಡುವ ವಿಧಾನ
    * ಮೊದಲು ಕುಕ್ಕರ್ ಗೆ ಜೋಳ ಮತ್ತು ಚಿಟಿಕೆ ಅರಿಶಿಣ ಹಾಕಿ ಎರಡು ವಿಶಲ್ ಬರುವವರೆಗೆ ಬೇಯಿಸಿ.
    * ಬಳಿಕ ಕುಕ್ಕರ್ ವಿಶಲ್ ತೆಗೆದು ಜೋಳ ಮೃದುವಾಗಿ ಬೆಂದಿದೆಯಾ ಎಂದು ಪರೀಕ್ಷಿಸಿಕೊಳ್ಳಿ.
    * ನಂತರ ಅದನ್ನು ಕುಕ್ಕರ್ ನಿಂದ ಹೊರ ತೆಗೆದು ಡ್ರೈ ಮಾಡಿಕೊಳ್ಳಿ.
    * ಜೋಳ ಬಿಸಿ ಇರುವಾಗಲೇ ಒಂದು ಬೌಲ್ ಗೆ ಹಾಕಿ ಅದಕ್ಕೆ ಬೆಣ್ಣೆ ಹಾಕಿ ಮಿಕ್ಸ್ ಮಾಡಿ.
    * ನಂತರ ಖಾರದ ಪುಡಿ, ಮೆಣಸಿನ ಪುಡಿ, ಚಾಟ್ ಮಸಾಲ, ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ.
    * ಬಳಿಕ ರುಚಿಗೆ ತಕ್ಕಷ್ಟು ಉಪ್ಪು, ನಿಂಬೆ ರಸ ಹಾಕಿ ಮಿಕ್ಸ್ ಮಾಡಿ.
    * ಖಾರ ತುಂಬಾ ತಿನ್ನುವರು ಎಷ್ಟು ಬೇಕೋ ಅಷ್ಟು ಖಾರ ಹಾಕಿಕೊಳ್ಳಿ.
    * ಬಳಿಕ ಒಂದು ಬೌಲ್ ಹಾಕಿ ಸವಿಯಿರಿ.

  • ಸ್ವಾದಿಷ್ಟವಾದ ರುಚಿಕರ ಹಲಸಿನ ಕಾಯಿಯ ಪಲ್ಯ…!!

    ಸ್ವಾದಿಷ್ಟವಾದ ರುಚಿಕರ ಹಲಸಿನ ಕಾಯಿಯ ಪಲ್ಯ…!!

    ಘಮ ಘಮ ಎಂದು ಪರಿಮಳ ಬೀರುವ, ಸವಿಯಾದ ಹಲಸಿನ ಹಣ್ಣೆಂದರೆ ಎಲ್ಲರಿಗೂ ಇಷ್ಟ. ಅದೇ ಹಲಸಿನ ಹಣ್ಣು ಎಳೇ ಕಾಯಿಯಾಗಿರುವಾಗ ಅದನ್ನು ತಂದು ಮಾಡುವ ಪಲ್ಯವೂ ಅಷ್ಟೇ ರುಚಿಕರ. ಮಲೆನಾಡಿನಲ್ಲಿ ಸಾಮಾನ್ಯವಾಗಿ ಮಾಡುವ ಸ್ವಾದಿಷ್ಟವಾದ ಪಲ್ಯವಿದು. ಅನ್ನಕ್ಕೆ ಹಾಕಿ ಕಲಸಿಕೊಂಡು ತಿನ್ನಲು ಬಹಳ ಸೊಗಸಾಗಿರುತ್ತದೆ. ಬನ್ನಿ ನೋಡೋಣ ಇದನ್ನು ಹೇಗೆ ಮಾಡುವುದೆಂದು.

    ಬೇಕಾಗುವ ಪದಾರ್ಥಗಳು:

    ಹಲಸಿನ ಕಾಯಿ: 1

    ತೆಂಗಿನ ತುರಿ- ಒಂದು ಸಣ್ಣ ಹೋಳು

    ಬ್ಯಾಡಗಿ ಮೆಣಸಿನಕಾಯಿ- 7-8

    ಕರಿಬೇವಿನ ಸೊಪ್ಪು- 5-6 ಎಲೆಗಳು

    ಎಣ್ಣೆ- 3-4 ಚಮಚ

    ನಿಂಬೆ ಹಣ್ಣು- ಒಂದು ಹೋಳು

    ಕಡಲೆಬೇಳೆ- ಕಾಲು ಚಮಚ

    ಉದ್ದಿನಬೇಳೆ- ಕಾಲು ಚಮಚ

    ಸಾಸಿವೆ ಕಾಳು- ಅರ್ಧ ಚಮಚ

    ಅರಿಶಿನ- ಸ್ವಲ್ಪ

    ಉಪ್ಪು- ರುಚಿಗೆ ತಕ್ಕಷ್ಟು

    ಮಾಡುವ ವಿಧಾನ:

    ಮೊದಲು ಹಲಸಿನಕಾಯಿಯನ್ನು ಚೆನ್ನಾಗಿ ತೊಳೆದು, ಮೇಲಿನ ಹಸಿರು ಬಣ್ಣದ ಮುಳ್ಳನ್ನು ಕತ್ತರಿಸಿ ತೆಗೆದು ಹಾಕಿ. ಈಗ ಒಳಗಿರುವ ಭಾಗದಲ್ಲಿ ಮೇಲ್ಪದರದಲ್ಲಿ ಸಿಗುವ ಭಾಗವನ್ನು ಉದ್ದುದ್ದನೆ ಸೀಳು ಮಾಡಿ.

    ನಂತರ ಅದನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ. ಹೀಗೆ ಕತ್ತರಿಸಿದ ಹೋಳುಗಳನ್ನು ಕುಕ್ಕರ್ ನಲ್ಲಿಟ್ಟು ಎರಡು ವಿಷಲ್ ಕೂಗುವಂತೆ ಬೇಯಿಸಿಕೊಳ್ಳಿ.

    ತೆಂಗಿನತುರಿ, ಬ್ಯಾಡಗಿ ಮೆಣಸಿನಕಾಯಿ, ಸಾಸಿವೆ ಕಾಳು ಇಷ್ಟನ್ನೂ ಮಿಕ್ಸರ್ ಜಾರ್ ಗೆ ಹಾಕಿಕೊಂಡು ನೀರು ಸೇರಿಸದೆ ರುಬ್ಬಿಕೊಳ್ಳಿ.

    ಗ ಸ್ಟವ್ ಹೊತ್ತಿಸಿ, ಫ್ರೈಯಿಂಗ್ ಪ್ಯಾನ್ ಇಟ್ಟು ಎಣ್ಣೆ ಹಾಕಿ. ಅದು ಕಾದಾಗ ಕಡಲೆಬೇಳೆ, ಉದ್ದಿನ ಬೇಳೆ, ಸಾಸಿವೆಕಾಳು ಹಾಕಿ. ಸಿಡಿದಾಗ ಸಣ್ಣಗೆ ಹೆಚ್ಚಿಟ್ಟ ಕರಿಬೇವಿನ ಸೊಪ್ಪನ್ನು ಹಾಕಿ, ಮಿಕ್ಸರ್ ಗೆ ಹಾಕಿದ ಮಸಾಲೆಯನ್ನೂ, ಸ್ವಲ್ಪ ಉಪ್ಪನ್ನೂ, ಅರಿಶಿನವನ್ನೂ ಹಾಕಿ ಸಣ್ಣ ಉರಿಯಲ್ಲಿ ಒಂದೆರಡು ನಿಮಿಷಗಳ ಕಾಲ ಹುರಿಯಿರಿ.

    ಈಗ ಕುಕ್ಕರ್ ನಿಂದ ತೆಗೆದ, ಬೆಂದಿರುವ ಹಲಸಿನಕಾಯಿಯ ಸಣ್ಣ ಹೋಳುಗಳನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಕೈ ಮಗುಚಿ. ಉರಿ ಹಾಗೇ ಸಣ್ಣಗಿರಲಿ. ಹೋಳು, ಮಸಾಲೆ ಪದಾರ್ಥಗಳೆಲ್ಲಾ ಒಟ್ಟಾಗಲಿ. ಮತ್ತೆ ನಾಲ್ಕೈದು ನಿಮಿಷಗಳ ನಂತರ ನಿಂಬೆರಸವನ್ನು ಹಾಕಿ ಮತ್ತೊಮ್ಮೆ ಕೈ ಮಗುಚಿ ಸ್ಟವ್ ಆರಿಸಿ. ರುಚಿಕರವಾದ ಹಲಸಿನ ಕಾಯಿಯ ಪಲ್ಯ ಸವಿಯಲು ಸಿದ್ಧ. ಅನ್ನಕ್ಕೆ ಹಾಕಿ ಕಲಸಿಕೊಂಡು, ಕೊಬ್ಬರಿ ಎಣ್ಣೆಯನ್ನು ಹಾಕಿಕೊಂಡು ತಿನ್ನಲು ಬಲು ರುಚಿಯಾಗಿರುತ್ತದೆ.

    ಟಿಪ್ಸ್:

    1.ಹಲಸಿನ ಕಾಯಿಯನ್ನು ಹೆಚ್ಚುವ ಮುನ್ನ ಕೈಗೆ ಎಣ್ಣೆಯನ್ನು ಸವರಿಕೊಳ್ಳಲು ಮರೆಯದಿರಿ ಮತ್ತೆ.

    2. ಕುಕ್ಕರ್ ನಲ್ಲಿ ಬೇಯಿಸಲು ಇಡುವ ಪಾತ್ರೆಗೂ ಸ್ವಲ್ಪ ಎಣ್ಣೆ ಸವರಿದರೆ, ಪಾತ್ರೆಗೆ ಹೋಳಿನ ಅಂಟು ಹಿಡಿಯುವುದಿಲ್ಲ.

    3. ಒಂದು ಹಿಡಿಯಷ್ಟು ಮೊದಲೇ ನೆನೆಸಿಟ್ಟುಕೊಂಡ ಕಡಲೆಕಾಳುಗಳನ್ನೂ ಸಹ ಈ ಪಲ್ಯಕ್ಕೆ ಉಪಯೋಗಿಸಬಹುದು. ಕುಕ್ಕರ್ ನಲ್ಲಿ ಹೋಳುಗಳನ್ನು ಬೇಯಿಸಲು ಇಡುವಾಗ ನೆನೆಸಿಟ್ಟ ಕಾಳುಗಳನ್ನೂ ಸೇರಿಸಿ ಬೇಯಿಸಿದರಾಯಿತು.

  • ರುಚಿಯಾದ ಗರಿಗರಿಯಾದ ಅಕ್ಕಿ ಸಂಡಿಗೆ…!!

    ರುಚಿಯಾದ ಗರಿಗರಿಯಾದ ಅಕ್ಕಿ ಸಂಡಿಗೆ…!!

    ತಯಾರಿಸಲು ಬೇಕಾಗುವ ಸಾಮಗ್ರಿಗಳು:

    * ಅಕ್ಕಿ  1 ಕೆಜಿ

    * ಉಪ್ಪು ರುಚಿಗೆ ತಕ್ಕಷ್ಟು

    * ನೀರು 4 ಲೀಟರ್

    * ಅಜವಾನ 1 ಟೀ ಚಮಚ

        ತಯಾರಿಸುವ ವಿಧಾನ:

       ಮೊದಲು ಅಕ್ಕಿಯನ್ನು 2 ರಿಂದ 3 ದಿನ ಬಿಸಿಲಿನಲ್ಲಿ ಒಣಗಿಸಬೇಕು ಅಂದರೆ ಪ್ರತಿದಿನ ಅಕ್ಕಿಯನ್ನು ತೊಳೆದು ನೀರನ್ನು ಬದಲಾಯಿಸಬೇಕು. ಮೂರನೇ ದಿನ ಅಕ್ಕಿಯನ್ನು ನೀರು ಹಾಕಿ ರುಬ್ಬಬೇಕು. ನಂತರ ರುಬ್ಬಿದ ಮೇಲೆ ದಪ್ಪ ತಳದ ದೊಡ್ಡ ಪಾತ್ರೆಗೆ ರುಬ್ಬಿದ ಅಕ್ಕಿ ಮತ್ತು 4 ಲೀಟರ್ ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಕುದಿಯಲು ಇಡಬೇಕು. ಆದರೆ ಅದರಲ್ಲಿ ಗಂಟುಗಳಾಗದಂತೆ ಸೌಟನ್ನು ಹಾಕಿ ತಿರುಗಿಸುತ್ತಾ ಇರಬೇಕು.

    ನಂತರ ಮಿಕ್ಸಿ ಮಾಡಿದ ಇಂಗು ಮತ್ತು ಜೀರಿಗೆ ಅಜವಾನವನ್ನು ಹಾಕಿ ಗಂಟುಗಳಾಗದಂತೆ ತಿರುಗಿಸಬೇಕು. ನಂತರ ಅದರ ಮೇಲೆ ಮುಚ್ಚಳವನ್ನು ಮುಚ್ಚಿ ಸ್ವಲ್ಪ ಹೊತ್ತು ಬಿಡಬೇಕು. ನಂಚರ ಪ್ಲಾಸ್ಟಿಕ್ ಹಾಳೆಯನ್ನು ತೆಗೆದುಕೊಂಡು ಅದರ ಮೇಲೆ ಸಂಡಿಗೆಯನ್ನು ಹಾಕಿ ಅದನ್ನು ಬಿಸಿಲಿಗೆ ಒಣಗಿಸಬೇಕು. ಅದು ಗರಿಗರಿಯಾಗಿ ಒಣಗಿದ ಮೇಲೆ ಎಣ್ಣೆಯಲ್ಲಿ ಕರಿದರೆ ರುಚಿಯಾದ ಗರಿಗರಿಯಾದ ಅಕ್ಕಿ ಸಂಡಿಗೆ ಸವಿಯಲು ಸಿದ್ಧವಾಗಿರುತ್ತದೆ.