ಇಂದ.

ಬಿ.ಪಿ ಎಲ್ ಕಾರ್ಡ
ಮತ್ತು ಅದರ ಕುಟುಂಬ
ವರ್ಗ ಕರ್ನಾಟಕ.
ಭಾರತ.

ಇವರಿಗೆ

ಸನ್ಮಾನ್ಯ ಮುಖ್ಯ ಮಂತ್ರಿಗಳು
ಕರ್ನಾಟಕ ಸರಕಾರ
ವಿಧಾನ ಸೌಧ  ಬೆಂಗಳೂರು.

ಮಾನ್ಯರೇ :
ವಿಷಯ  :  ನಮ್ಮ ಕುಟುಂಬದ ಮೇಲೆ ಆಗುತ್ತಿರುವ ದೌರ್ಜನ್ಯ ಸರಿಪಡಿಸಿ ಕೊಡುವ ಬಗ್ಗೆ.

ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದಲ್ಲಿ ವಾಸಿಸುವ ನಾನು ಹಾಗೂ ನನ್ನ ಕುಟುಂಬದ ಅಂತ್ಯೋದಯ ,ಸಂಧ್ಯಾ ಸುರಕ್ಷಾ,  ಉಜ್ವಲಾ ಮೊದಲಾದವರು  ತಮ್ಮ ಬಳಿ ಕಳಕಳಿಯಿಂದ ಬೇಡಿಕೊಳ್ಳುವುದೇನೆಂದರೆ.ನಮ್ಮ ಮೂಲಕ ತಾವು ಸಮಾಜದಲ್ಲಿ ವಾಸಿಸುವ ಕಡು ಬಡವರ ನಿರ್ಗತಿಕರ ಉದ್ಧಾರ ಮಾಡಬೇಕು ಎಂದು ಬಯಸಿದ್ದೀರಿ , ಆದರೆ ಅವುಗಳಲ್ಲಿ ಹೆಚ್ಚಿನದಾಗಿ ಅಪಾತ್ರರ ಪಾಲಾಗಿರುವ ನಾವು ಅನುಭವಿಸುತ್ತಿರುವ ಯಾತನೆಗಳು ನಮ್ಮ ಬಗ್ಗೇ ನಮಗೆ ಹೇಸಿಗೆ ಉಂಟು ಮಾಡುತಿದ್ದು ಸಮಾಜದಲ್ಲಿ ಪ್ರಾಮಾಣಿಕವಾಗಿ ಬದುಕಿ ಸರಿಯಾದ ಮಾಹಿತಿಯನ್ನು ನೀಡಿ ತೆರಿಗೆ ತುಂಬಿ ಯಾವ ಸೌಲಭ್ಯಗಳನ್ನೂ ಪಡೆಯದ ಸಜ್ಜನರ ಬಗ್ಗೆ ಅನುಕಂಪವನ್ನೂ ಉಂಟು ಮಾಡಿದೆ.

ನಮ್ಮನ್ನು ಪಡೆಯುವಾಗ ಬಹುತೇಕ ಹೆಚ್ಚಿನ ಕುಟುಂಬದವರು ಸುಂದರವಾಗಿ ಸುಳ್ಳುಮಾಹಿತಿಯನ್ನು ಒದಗಿಸಿರುತ್ತಾರೆ.ನನ್ನನ್ನು ಪಡೆದವರ  ಪೈಕಿ ಕೆಲವರು ಆರ್ಥಿಕವಾಗಿ ಕೋಟ್ಯಾಧಿ ಪತಿಗಳು ಇದ್ದಾರೆ ಎಂದರೆ ತಮಗೆ ಖಂಡಿತವಾಗಿ ಆಶ್ಚರ್ಯ ಆಗದು ಯಾಕೆಂದರೆ ಈ ಕಟುಸತ್ಯ ತಮಗೂ  ತಿಳಿದೇ ಇದೆ.ಪಾಪ ನೀವಾದರೂ ಏನು ಮಾಡಲು ಸಾಧ್ಯ ಹೇಳಿ ? ಕಠಿಣವಾದ ನಿಲುವು ಕೈಗೊಂಡರೆ ಅಕ್ರಮ ಬಿಪಿಎಲ್ ಹೊಂದಿದವರೇ ಬರುವ ಚುನಾವಣೆಯಲ್ಲಿ ನಿಮ್ಮ ಹಾಗೂ ನಿಮ್ಮ ಸರಕಾರದ ಠೇವಣಿಯನ್ನೇ ಜಪ್ತು ಮಾಡುತ್ತಾರೆ ಎಂಭ ಭಯ ನಿಮಗೆ ಸ್ವಾಭಾವಿಕ.
ಹಸಿವು ಮುಕ್ತ ಕರ್ನಾಟಕ ಎಂದು ನಮ್ಮ ಮೂಲಕ ತಾವು ಉಚಿತ ಅಕ್ಕಿ ನೀಡುತ್ತಿರುವಿರಿ.
ಪಡಿತರ ಅಂಗಡಿಯಿಂದ ಪಡೆದ ಅಕ್ಕಿ ಮನೆಯನ್ನು ತಲುಪುವ ಮೊದಲೇ ಅರ್ಧ ದಾರಿಯಲ್ಲೇ ಮಾರಾಟಮಾಡಿ ಅದರಿಂದ ಬಂದ ಹಣದಿಂದಲೇ ಸಾರಾಯಿ ಕುಡಿಯುವುದರ ಮೂಲಕ ಸರಕಾದ ಬೊಕ್ಕಸಕ್ಕೆ ಹಣ ನೀಡುವ ಉದಾರಿಗಳನ್ನೂ ನನ್ನ ಕಣ್ಣುಗಳಿಂದಲೇ ನೋಡಿದ್ದೇನೆ.
ಮೊನ್ನೆಯಂತೂ ಕೊರೊನಾ ಕಾರಣದಿಂದ ಬಹಿರಂಗ ಸರಾಯಿ ಸಿಗದೇ ಇದ್ದಾಗ ಕೆಲವರು ನೂರು ರೂಪಾಯಿಯ ಸರಾಯಿಗೆ ಎರಡು ನೂರಾ ಐವತ್ತು ರೂಪಾಯಿ ನೀಡಿ ಬೆಳಿಗ್ಗೆ ಸಂಜೆ ಒಟ್ಟೂ ಐದುನೂರು ನೀಡಿ ಕದ್ದು  ಕುಡಿವಾಗ ಅವರ ಕಿಸೆಯಲ್ಲಿ ಇದ್ದ ನಾನು  ಕಣ್ಣೀರು ಹಾಕಿದ್ದು ಸತ್ಯ.
ಮೂಟಗಟ್ಟಲೆ ಅಕ್ಕಿ ಪುಕ್ಕಟೆ ಪಡೆದು ಐದುನೂರರ ಸರಾಯಿ ಕುಡಿದು ಅಕ್ಕಿಯನ್ನು ಅರ್ಧದಲ್ಲಿಯೇ ಮಾರುವ ದರಿದ್ರತನ ಯಾವ ನೆಲಕ್ಕೂ ಬರಬಾರದು ರಾಯರೇ.
ಕೆಲವು ಬಡವರಿಗೆ ಅದು ದೋಸೆಯ ಅಕ್ಕಿ ಮಾತ್ರ.
ನನ್ನನ್ನು ಹೊಂದಿದ ಅನೇಮಾಡಿಟುಂಬಗಳು ನಿಮ್ಮಹಾಗೇ ಸೋನಾಮಸೂರಿಯಂಥ ಅಕ್ಕಿಯ ಅನ್ನವನ್ನೇ ಉಣ್ಣುತ್ತವೆ ಅಂದರೆ ತಮಗೂ ಅಭಿಮಾನ ಅನಿಸಬೇಕು ಅಲ್ಲವೇ?
ಒಂದೇ ಮನೆಯಲ್ಲಿ ನಾನು ಎರಡು ಮೂರರ ಸಂಖ್ಯೆಯಲ್ಲಿಯೂ ಇದ್ದೇನೆ ಬಲ್ಲಿರಾ?
ಆದರೂ ನನಗೆ ನನ್ನ ಬಗ್ಗೆ ಬೇಸರ ಇದೆ ಸರ್  ಯಾಕೆ ಬಲ್ಲಿರಾ ? ರಾಜ್ಯದಲ್ಲಿ ಹಲವಾರು ಜಮೀನುಗಳಲ್ಲಿ ಕೃಷಿ ಆಗದೇ ಅದು ಬಂಜರಾಗಲು ನಾನೇ ಕಾರಣ.ರಟ್ಟೆ ಮುರಿದು ದುಡಿವ ಜನ ಕಟ್ಟೆ ಪಂಚಾಯತಿಯಲ್ಲಿ ತೊಡಗಲು ನಾನೇ ಕಾರಣ.
ಇದಲ್ಲದೇ ಇಂಥ ಆಲಸಿಗಳಾಗಿರುವ ಕೃಷಿಮಾಡದೇ ಭೂಮಿ ಹಾಳು ಕೆಡಗಿರುವ ರೈತರಿಗೆ ನೀವು ಪ್ರತಿ ವರ್ಷ ಆರುಸಾವಿರ ಹಣ ನೀಡ್ತಾಇದ್ದೀರಿ.ಕೆಲವರು ಈ ಹಣವನ್ನೂ ದುಂದುವೆಚ್ಚಕ್ಕೆ ಬಳಸಿಕೊಳ್ತಿದ್ದಾರೆ.
ಇಂದು ಬಹುತೇಕ ಕಡೆಗಳಲ್ಲಿ ಕೂಲಿಮಾಡಲು ಕಾರ್ಮಿಕರು ಸಿಗದೇ ಹೊರರಾಜ್ಯದ ಕೂಲಿಗಳು ಕರ್ನಾಟಕಕ್ಕೆ ಬರಲು ನಾನೇ ಕಾರಣ.
ಇನ್ನು ನನ್ನ ಜನ್ಮಕ್ಕೆ ಕಾರಣವಾಗುವ ಕಂದಾಯ ಇಲಾಖೆಯಲ್ಲಿ ನನ್ನ ನಾಮಕರಣ ಮಾಡಲೆಂದೇ ಅನೇಕ ಪುರೋಹಿತರು ಇರುತ್ತಾರೆ.ಅವರಿಗೆ ಬಿಪಿಎಲ್ ಕಾರ್ಡ ಕೊಡಿಸುವುದೇ ಉದ್ಯೋಗ. ನನ್ನ ನಾಮಕರಣದಿಂದ ಅವರಿಗೆ ಬಂದ ದಕ್ಷಿಣೆಯಲ್ಲಿ ಮೇಲಾಧಿಕಾರಿಗಳಿಗೂ ಪಾಲು ಇದೆ ಎಂದರೆ ನೀವು ಊಹಿಸಿ ನನ್ನ ಘನತೆ ಎಷ್ಟು ಎಂದು!
ಇನ್ನು ನನ್ನ ಕಾರಣದಿಂದಲೇ ಹೊಟ್ಟೆ ತುಂಬಿಸಿಕೊಂಡವರು ಈ ನೆಲದ ವಿರುದ್ಧವೇ ದ್ರೋಹ ಎಸಗುವ ಕೆಲಸ ಮಾಡುತ್ತಾರೆ.ಆಗಂತೂ ನನಗೆ ‌ಅಧಿಕಾರಿಗಳ ಬಗ್ಗೆ ಜನಪ್ರತಿನಿಧಿಗಳ ಬಗ್ಗೆ ಹೇಸಿಗೆ ಹುಟ್ಟುತ್ತದೆ . ಒಂದು ಕಾರ್ಡಿಗೆ ಹತ್ತು ಕೆಜಿ ಮಾತ್ರ  ಪುಕ್ಕಟೆ ಕೊಡಿ  ಕೊಡಿ ರಾಯರೇ ಉಳಿದ ಅಕ್ಕೆಗೆ ಕನಿಷ್ಟ ಬೆಲೆ ನಿಗದಿ ಮಾಡಿ ಇದರಿಂದ ಜನಸಂಖ್ಯೆ ಆದರೂ ಕಡಿಮೆ ಆದೀತು.ಪುಕ್ಕಟ್ಟೆ ಅಕ್ಕಿಯಿಂದ ಕೆಲವರು ಕೆಲಸಕ್ಕೇ ಹೋಗದೇ ಬರೀ ಮಕ್ಕಳನ್ನು ಹೆಚ್ಚಿಸಿ ಕೊಳ್ತಾಇದ್ದಾರೆ ಅಂದ್ರೆ ನಿಮಗೆ ತಮಾಷೆ ಮಾಡುತ್ತಾಇದ್ದೇನೆ ಅನಿಸೀತು. ಆದರೂ ಇದೂ ಕೂಡ ವಾಸ್ತವವೇ ಹೌದು.
ನನಗೆ ಆಧಾರ ಕಾರ್ಡ ಜೋಡಣೆ ಮಾಡಿದ ನಂತರ ಅದರ ಸತ್ಯಾಸತ್ಯತೆಯನ್ನು ತಾವು ತಿಳಿಯಬಹುದೆಂದು ನಾನು ಭಾವಿಸಿದ್ದೆ ಆದರೆ ಅದು ಸುಳ್ಳಾಯ್ತು.ಈಗಂತೂ ಕೊರಾನಾದ ಕಾರಣದಿಂದ ನನ್ನ ದುರುಪಯೋಗ ಬೇಕಾ ಬಿಟಬಿಟ್ಟಿ ಆಗ್ತಾಇದೆ.
ಇನ್ನು ನಮ್ಮ ಕುಟುಂಬದ ಸಂಧ್ಯಾ ಸುರಕ್ಷಾದ ಪರಿಸ್ಥಿತಿ ಅಂತೂ ಕೊರೊನಾಕ್ಕಿಂತ ಭೀಕರ. ಅರವತ್ತೈದು ವರ್ಷ ಯಾವಾಗ ಆಗ್ತದೋ ಅಂತ ಕಾದುಕುಳಿತು ಎಲ್ಲ ಸೌಲಭ್ಯ ಇರುವ ವ್ಯಕ್ತಿ ಆತನ ಮಕ್ಕಳು ಸರಕಾರಿ ನೌಕರಿ ಇದ್ದರೂ ತನ್ನನ್ನು ನೋಡಿಕೊಳ್ತಾ ಇಲ್ಲ ಅಂತ ಬಾಂಡ್ ಬೇರೆ ಕೊಟ್ಟು ಸರಕಾರದ ಹಣ ಹಾಡಾ ಹಗಲು ದೋಚತಾ ಇದ್ರೂ ತಾವೆಲ್ಲ ದ್ರೌಪದಿಯ ವಸ್ತ್ರಾಪಹರಣದ ಸಭೇಲಿ ತಲೆ ಕೆಳಗೆ ಹಾಕಿಕೂತ ದ್ರೋಣ ಭೀಷ್ಮರ ಗೆಟಪ್ ನಲ್ಲಿ ಇರ್ತೀರಿ ಅಂತ ಅದು ಗೊಣಗ್ತಾ ಇದೆ.
ಯಾವ ವ್ಯಕ್ತಿಯ ಮಕ್ಕಳು ಸರಕಾರದ ನೌಕರಿಯಲ್ಲಿ ಇದ್ದೂ ಹೆತ್ತವರನ್ನು ಅವರ ಇಳಿವಯಸ್ಸಿನಲ್ಲಿ ನೋಡಿಕೊಳ್ಳೋದಿಲ್ಲ ಅಂತಾದರೆ ಅಂಥ ದುರಾತ್ಮರ  ಸೇವೆ ಸರಕಾರಕ್ಕಾದರೂ ಯಾಕೆ ಬೇಕು ? ಅವರನ್ನು ಕೆಲಸದಿಂದ ವಜಾ ಮಾಡಬೇಕಲ್ಲವೆ?
ಸಂಧ್ಯಾ ಸುರಕ್ಷಾ ಫಲಾನುಭವಿಯ ಹೆಸರಲ್ಲಿ ಇರುವ ಜಮೀನು ಆತನ ಮರಣಾ ನಂತರ ಸರಕಾರಕ್ಕೆ ಸೇರುತ್ತದೆ ಅಂತ ಒಂದೇ ಒಂದು ತೀರ್ಮಾನ ಮಾಡಿ ನೋಡಿ ಸಾಹೇಬ್ರೇ ಮಾರನೇ ದಿನವೇ ಈ ಯೋಜನೆ ಪಡೆವ ಶೇಖಡಾ ಎಂಭತ್ತರಷ್ಟು ಜನ ಅರ್ಜಿ ವಾಪಸ್ ತೆಗೆಯುತ್ತಾರೆ.
ನೀವೆಲ್ಲ ಯಾಕೆ ತೆರಿಗೆ ಹಣನ ಇಂಥ ಅಯೋಗ್ಯರಿಗೆ ಕೊಡ್ತಿದ್ದೀರೋ ಅರ್ಥನೇ ಆಗ್ತಿಲ್ಲ.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ಉತ್ತಮವಾದ ಮನೆ,ಓಡಾಡಲು ಕಾರು ಮನೆಯಲ್ಲಿ ಸರಕಾರದ ನೌಕರಿ ಇರುವ ಎಷ್ಟೋ ಕುಟುಂಬದವರೇ ಸುಳ್ಳು ಮಾಹಿತಿ ನೀಡಿ ಸರಕಾರದ ಯೋಜನೆಗಳ ಫಲಾನುಭವಿಗಳಾಗಿ  ಆಲಸಿಗಳಾಗಿ ದೇಶದ ಆರ್ಥಿಕ ಸ್ಥಿತಿಯ ಅಧ ಪತನಕ್ಕೆ ಕಾರಣರಾಗಿದ್ದಾರೆ.
ಇದರಲ್ಲಿ ಅಧಿಕಾರಿಗಳ , ಮಧ್ಯವರ್ತಿಗಳ, ಹಾಗೂ ರಾಜಕಾರಣಿಗಳ ಪಾತ್ರವೇ ಹೆಚ್ಚಿದೆ.
ಆದುದರಿಂದ ನನ್ನ ವಿನಂತಿ ಏನೆಂದರೆ
ಆಧಾರ ಕಾರ್ಡನ ಮೂಲಕ ಪ್ರತಿಯೊಬ್ಬ ಬಿಪಿಎಲ್ ಕಾರ್ಡದಾರರ ಮರು ಸರ್ವೆ ಕುಳಿತಲ್ಲೇ ಮಾಡಿಸಿ.ಈಗಂತೂ ಕೊರೋನಾ ಕಾರಣದಿಂದ ಕೆಲವು ಇಲಾಖೆಯಲ್ಲಿ ಕೆಲಸವೇ ಇಲ್ಲವಾಗಿದೆ ಅವರನ್ನೆಲ್ಲ ಬಳಸಿ.ಸುಳ್ಳುಮಾಹಿತಿ ನೀಡಿ ನನ್ನನ್ನು ಪಡೆದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಿ . ಅಯೋಗ್ಯರಿಗೆ ಕಾರ್ಡ ನೀಡಿದ ಅಧಿಕಾರಿಗಳನ್ನು ವಜಾಮಾಡಿ.ನಿಮ್ಮ ಅಧಿಕಾರ ಹೋದರೆ ಹೋಗಲಿ ಅಧಿಕಾರ ಮುಖ್ಯವಲ್ಲ.ದೇಶ ಉಳಿಯಬೇಕು ನ್ಯಾಯ ಗೆಲ್ಲಬೇಕು.
ಧನ್ಯವಾದಗಳೊಂ
ದಿಗೆ
ತಮ್ಮ ವಿಶ್ವಾಸಿ

RELATED ARTICLES  ಜೈನ ಸಮುದಾಯದ ದಾರ್ಶನಿಕ ಮುನಿ, ಆಚಾರ್ಯ ಶ್ರೀ ವಿದ್ಯಾಸಾಗರ ಮಹಾರಾಜ ಇನ್ನಿಲ್ಲ.

ಬಿಪಿಎಲ್ ಕರ್ನಾಟಕ