ಚಳಿಗಾಲ ಸಮೀಪಿಸುತ್ತಿದೆ.. ಎಲ್ಲರೂ ಒಳಗಡೆ ಮಡಿಚಿಟ್ಟಿರುವ ಸ್ವೆಟರ್, ಶಾಲ್ ಗಳನ್ನು ಹೊರ ತೆಗೆದು ಮೈ ತುಂಬಾ ಧರಿಸಿಕೊಳ್ಳಲು ಪ್ರಾರಂಭ ಮಾಡುತ್ತಾರೆ. ಅಷ್ಟೇ ಅಲ್ಲ, ಬೆಳಿಗ್ಗೆ ಆದ ತಕ್ಷಣ ಎದ್ದೇಳಲು ಮನಸ್ಸಾಗದೆ, ಇವತ್ತು ಆಫೀಸ್ ಗೆ ಹೋಗದಿರಲು ಏನು ಕಾರಣ ಹೇಳಲಿ ಎಂದು ಯೋಚಿಸುವ ಹೊಸ ಕೆಲಸ ಪ್ರಾರಂಭವಾಗುತ್ತದೆ ಅಲ್ಲವೇ? ಆದರೆ ನೀವು ಸ್ವಲ್ಪ ನಿಮ್ಮ ಆಹಾರದಲ್ಲಿ ಬದಲಾವಣೆ ತಂದರೆ ಈ ಆಲಸ್ಯವನ್ನು ಹೋಗಲಾಡಿಸಿ ಖುಷಿ ಖುಷಿಯಾಗಿ, ಚಟುವಟಿಕೆಯಿಂದಿರಲು ಸಾಧ್ಯವಾಗುತ್ತದೆ.
ಕೆಲವು ಆರೋಗ್ಯಕರವಾದ ಆಹಾರಗಳು ಈ ಚಳಿಗಾಲದ ತಿಂಗಳಿನ ವಿರುದ್ಧ ಹೋರಾಡಿ ನಿಮ್ಮನ್ನು ಉಲ್ಲಸಿತರನ್ನಾಗಿಡಲು ಸಹಾಯ ಮಾಡುತ್ತವೆ. ಈ ಆಹಾರಗಳು ನಿಮ್ಮ ದೇಹಕ್ಕೆ ಈ ಋತುವಿನಲ್ಲಿ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುತ್ತದೆ. ಪ್ರತಿಯೊಂದು ಋತುಮಾನಕ್ಕೆ ಅನುಗುಣವಾಗಿ ನಾವು ವರ್ಷಪೂರ್ತಿ ಆಹಾರ ಸೇವಿಸಿದರೆ, ನಮ್ಮ ಆರೋಗ್ಯ ಸುಸ್ಥಿಯಲ್ಲಿರುತ್ತದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯ ಪಡುತ್ತಾರೆ.
ಬನ್ನಿ; ಅಂತಹ ಕೆಲವು ಸೂಪರ್ ಫುಡ್ ಗಳು ಯಾವುವು ಅಂತ ತಿಳಿದುಕೊಳ್ಳೋಣ;
ಸಿಹಿ ಗೆಣಸು:
ಸಿಹಿ ಗೆಣಸಿನಲ್ಲಿ ಉತ್ತಮ ಕ್ಯಾಲೋರಿ ಜೊತೆಗೆ ಹೇರಳವಾದ ಪೋಷಕಾಂಶಗಳಿವೆ. ಇದು ಚಳಿಗಾಲಕ್ಕೆ ಹೇಳಿ ಮಾಡಿಸಿದ ಆಹಾರ. ಇದರಲ್ಲಿ ಸಕ್ಕರೆಯ ಅಂಶ ಅಧಿಕವಾಗಿದ್ದರೂ ಇದರಲ್ಲಿರುವ ಪೋಷಕಾಂಶದ ಪ್ರಮಾಣ ಅಧಿಕ ಮಟ್ಟದ್ದು. ಇದರಲ್ಲಿ ವಿಟಮಿನ್ ಎ, ನಾರಿನಂಶ ಮತ್ತು ಪೊಟ್ಯಾಶಿಯಂ ಅಂಶಗಳಿವೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಮಲಬದ್ಧತೆ ನಿವಾರಣೆಯಾಗಿ, ಎದೆಯುರಿ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ, ಇದು ದೇಹದ ಇಮ್ಮ್ಯುನಿಟಿ ಯನ್ನೂ ಸುಧಾರಿಸುತ್ತದೆ.
ಟರ್ನಿಪ್ ಮತ್ತು ಅದರ ಎಲೆಗಳು:
ಇದು ಮೂಲಂಗಿ ಗುಂಪಿಗೆ ಸೇರಿದ ತರಕಾರಿಯಾಗಿದ್ದು, ಅಧಿಕ ಪ್ರಮಾಣದಲ್ಲಿ ಪಿಷ್ಟವನ್ನು ಹೊಂದಿದ್ದು ಅತ್ಯುತ್ತಮ ಮಟ್ಟದ ಆ್ಯಂಟಿ ಆಕ್ಸಿಡೆಂಟ್ ಆಗಿದ್ದು ಕ್ಯಾನ್ಸರ್ ನ ಅಪಾಯವನ್ನು ಕಡಿಮೆಗೊಳಿಸುತ್ತದೆ. ವಿಟಮಿನ್ ಕೆ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದು, ಎಲೆಗಳಲ್ಲಿ ವಿಟಮಿನ್ ಎ ಪೋಷಕಾಂಶಗಳಿವೆ. ಈ ತರಕಾರಿ ನಮ್ಮ ಹೃದಯ ರಕ್ತನಾಳಗಳ ಸಂಪೂರ್ಣ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ, ಮೂಳೆಗಳನ್ನು ಸದೃಢಗೊಳಿಸಿ, ಜೀರ್ಣಕ್ರೀಯೆಯನ್ನು ಸರಾಗಗೊಳಿಸುತ್ತದೆ.
ಖರ್ಜೂರ:
ಖರ್ಜೂರದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಿರುವುದರಿಂದ ತೂಕ ಹೆಚ್ಚಳವಾಗದಂತೆ ನೋಡಿಕೊಳ್ಳುತ್ತದೆ. ಇದು ಅತ್ಯಧಿಕ ಪ್ರಮಾಣದ ಪೋಷಕಾಂಶಗಳನ್ನು ಹೊಂದಿದ್ದು, ಜಿಮ್ ಹೋಗುವ ಪ್ರತಿಯೊಬ್ಬರು ಕಡ್ಡಾಯವಾಗಿ ಇದನ್ನು ತಿನ್ನಬೇಕು. ನಿಯಮಿತವಾಗಿ ಖರ್ಜೂರ ತಿನ್ನುವುದರಿಂದ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುತ್ತವೆ.
ಬಾದಾಮಿ ಮತ್ತು ವಾಲ್ನಟ್:
ನಿಯಮಿತವಾಗಿ ಬಾದಾಮಿ ಮತ್ತು ವಾಲ್ನಟ್ ನ್ನು ಚಳಿಗಾಲದಲ್ಲಿ ಸೇವಿಸುವುದರಿಂದ ದೇಹದ ನರಗಳ ವ್ಯವಸ್ಥೆಯು ಆರೋಗ್ಯದಿಂದ ಮತ್ತು ಚಟುವಟಿಕೆಯಿಂದಿರುತ್ತದೆ. ಹೃದಯದ ಆರೋಗ್ಯಕ್ಕೂ ಇದು ಅತ್ಯುತ್ತಮ.
ರಾಗಿ:
ಸಸ್ಯಹಾರಿಗಳಿಗೆ ಕ್ಯಾಲ್ಶಿಯೊ ಪಡೆಯಲು ಇರುವ ಅತ್ಯುತ್ತಮ ಆಹಾರ ರಾಗಿ. ಇದು ರಕ್ತಹೀನತೆ ಮತ್ತು ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ, ರಾಗಿ ನಿದ್ರಾಹೀನತೆ, ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.
ಸಜ್ಜೆ:
ಈ ಪುಟ್ಟ ಧಾನ್ಯ ಅಧಿಕ ಪ್ರಮಾಣದಲ್ಲಿ ಪ್ರೋಟೀನ್, ನಾರು ಮತ್ತು ಕೊಬ್ಬಿನ ಅಂಶವನ್ನು ಹೊಂದಿದೆ. ಇದರಲ್ಲಿರುವ ಕಬ್ಬಿಣದ ಅಂಶ ರಕ್ತಹೀನತೆಯ ಸಮಸ್ಯೆಯನ್ನು ಗುಣಪಡಿಸುತ್ತದೆ. ನಿಯಮಿತವಾಗಿ ಸಜ್ಜೆಯನ್ನು ಸೇವಿಸುವುದರಿಂದ ಮೂಳೆಗಳು ಸದೃಢಗೊಳಿಸುತ್ತದೆ.