Satwadhara News

Category: YELLAPUR

ಉತ್ತರಕನ್ನಡ ಜಿಲ್ಲೆಯ ಯೆಲ್ಲಾಪುರ ತಾಲೂಕಿನಲ್ಲಿ ನಡೆದ ಕಾರ್ಯಕ್ರಮಗಳ ವರದಿ ಮತ್ತು ಇನ್ನಿತರ ಘಟನಾವಳಿಗಳ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

  • ಟ್ರ್ಯಾಕ್ಟರ್ ಉರುಳಿ ಬಿದ್ದು ಚಾಲಕ ಸಾವು.

    ಟ್ರ್ಯಾಕ್ಟರ್ ಉರುಳಿ ಬಿದ್ದು ಚಾಲಕ ಸಾವು.

    ಜೋಯಿಡಾ : ತಾಲೂಕಿನ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಪಣಸೋಲಿ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಟ್ರ್ಯಾಕ್ಟರ್ ಉರುಳಿ ಬಿದ್ದು ಚಾಲಕ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.

    ಜೋಯಿಡಾ ತಾಲೂಕಿನ ಪಣಸೋಲಿ ಗ್ರಾಮದ ನಿವಾಸಿ ವಿಶ್ವನಾಥ ಪುರುಷೋತ್ತಮ ಆಚಾರಿ (30)ಎಂಬಾತನೇ ಮೃತಪಟ್ಟ ದುರ್ದೈವಿ. ಪಣಸೋಲಿಯಿಂದ ಸಫಾರಿಗೆ ಹೋಗುವ ರಸ್ತೆಯ ಪಕ್ಕ ಟ್ರ್ಯಾಕ್ಟರ್ ಉರುಳಿ ಬಿದ್ದು ಅದರಡಿ ಸಿಲುಕಿಕೊಂಡಿದ್ದ ಚಾಲಕ ವಿಶ್ವನಾಥ ಪುರುಷೋತ್ತಮ ಆಚಾರಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆ. ಇದೇ ಸಂದರ್ಭದಲ್ಲಿ ಇನ್ನೋರ್ವ ವ್ಯಕ್ತಿಗೆ ಗಾಯವಾಗಿದೆ.

    ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ, ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

  • ಕಾಲು ನೋವು ತಾಳಲಾರದೇ ಬಾವಿಗೆ ಹಾರಿದ ವ್ಯಕ್ತಿ ಸಾವು.

    ಕಾಲು ನೋವು ತಾಳಲಾರದೇ ಬಾವಿಗೆ ಹಾರಿದ ವ್ಯಕ್ತಿ ಸಾವು.

    ಕಾಲು ನೋವಿನಿಂದ ಬಳಲುತ್ತಿದ್ದ ವ್ಯಕ್ತಿ ನೋವು ತಾಳಲಾರದೆ ಮನೆಯ ಮುಂದಿನ ಬಾವಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು, ವ್ಯಕ್ತಿಯನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದರೂ ಬಾವಿಗೆ ಬಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ನಡೆದಿದೆ.

    ಗಣಪತಿ ಈರ ನಾಯ್ಕ ಕೋಲ್ ಶಿರಸಿ ( 65 ) ಮೃತ ವ್ಯಕ್ತಿ. ಬಾವಿಗೆ ಬಿದ್ದಿದ್ದ ಈತನನ್ನು ಅಗ್ನಿಶಾಮಕ ದಳದವರು ಬಾವಿಯಿಂದ ಮೇಲೆಕ್ಕೆ ಎತ್ತಿದ್ದರು. ಚಿಕಿತ್ಸೆಗಾಗಿ ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ವೈದ್ಯರು ಮೃತಪಟ್ಟಿರುವುದು ದೃಡಪಡಿಸಿದ್ದಾರೆ.

  • ಮಲೆನಾಡಿನಲ್ಲಿ ಮಂಗನ ಕಾಯಿಲೆ ಉಲ್ಬಣ

    ಮಲೆನಾಡಿನಲ್ಲಿ ಮಂಗನ ಕಾಯಿಲೆ ಉಲ್ಬಣ

    ರಾಜ್ಯದ ಮಲೆನಾಡಿನಲ್ಲಿ ಮಂಗನ ಕಾಯಿಲೆ ಉಲ್ಬಣಗೊಂಡಿದೆ. ಸೋಮವಾರ ಒಂದೇ ದಿನ 13 ಜನರಿಗೆ ಸೋಂಕು ದೃಢಪಟ್ಟಿದೆ. ಈ ಕುರಿತು ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ಕಳೆದ 24 ಗಂಟೆಯಲ್ಲಿ 63 ಜನರನ್ನು ಮಂಗನ ಕಾಯಿಲೆ ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ 13 ಜನರಿಗೆ ಸೋಂಕು ದೃಢಪಟ್ಟಿರುವುದಾಗಿ ತಿಳಿಸಿದೆ.

    ಶಿವಮೊಗ್ಗದಲ್ಲಿ 42 ಮಂದಿಯನ್ನು ಕಳೆದ 24 ಗಂಟೆಯಲ್ಲಿ ಮಂಗನ ಕಾಯಿಲೆ ಪತ್ತೆ ಪರೀಕ್ಷೆಗೆ ಒಳಪಡಿಸಲಾಯಿತು. ಇವರಲ್ಲಿ 6 ಜನರಿಗೆ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಚಿಕ್ಕಮಗಳೂರಲ್ಲಿ 21 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು 7 ಜನರಿಗೆ ದೃಢಪಟ್ಟಿದೆ ಎಂದು ತಿಳಿಸಿದೆ.

    ಇದುವರೆಗೆ 3220 ಮಂದಿಯನ್ನು ಮಂಗನ ಖಾಯಿಲೆ ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದ್ದು, 89 ಜನರಿಗೆ ಪಾಸಿಟಿವ್ ಬಂದಿದೆ. ಅವರಲ್ಲಿ 63 ಮಂದಿ ಗುಣಮುಖರಾಗಿದ್ದಾರೆ. ಇಬ್ಬರು ಸಾವನ್ನಪ್ಪಿದ್ದಾರೆ. ಸದ್ಯ 24 ಸಕ್ರಿಯ ಪ್ರಕರಣಗಳು ಇವೆ ಎಂದು ತಿಳಿಸಿದೆ.

  • ಮೀನು ಹಿಡಿಯಲು ತೆರಳಿದ್ದ ಸಂದರ್ಭದಲ್ಲಿ ನೀರಲ್ಲಿ ಮುಳುಗಿ ತಂದೆ-ಮಗ ಸಾವು.

    ಮೀನು ಹಿಡಿಯಲು ತೆರಳಿದ್ದ ಸಂದರ್ಭದಲ್ಲಿ ನೀರಲ್ಲಿ ಮುಳುಗಿ ತಂದೆ-ಮಗ ಸಾವು.

    ಯಲ್ಲಾಪುರ : ತಂದೆ , ಮಗ ಇಬ್ಬರೂ ಮೀನು ಹಿಡಿಯಲು ತೆರಳಿದ್ದ ಸಂದರ್ಭದಲ್ಲಿ ನೀರಲ್ಲಿ ಮುಳುಗಿ ತಂದೆ-ಮಗ ಮೃತಪಟ್ಟಿರುವ ಘಟನೆ ತಾಲೂಕಿನ ಮಂಚಿಕೇರಿ ಸಮೀಪದ ಬೇಡ್ತಿ ಹಳ್ಳದಲ್ಲಿ ನಡೆದಿದೆ. ಸಂಜೆಯಾದರೂ ಮನೆಗೆ ಮರಳಿರಲಿಲ್ಲ. ಹೀಗಾಗಿ ಕುಟುಂಬಸ್ಥರು ಅನುಮಾನ ಬಂದು ಹುಡುಕಾಟ ನಡೆಸಿದ್ದಾಗ ವಿವರ ತಿಳಿದಿದೆ.

    ಬೇಡ್ತಿ ಹಳ್ಳದ ಸುತ್ತಮುತ್ತ ಹುಡುಕಾಟ ನಡೆಸಿದಾಗ ಮುಳುಗಿ ಮೃತಪಟ್ಟಿರುವುದು ತಿಳಿದುಬಂದಿದೆ. ತಕ್ಷಣ ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಭೇಟಿ ನೀಡಿದ್ದು, ಸ್ಥಳೀಯರ ಸಹಾಯದಿಂದ ಮೃತ ದೇಹಗಳನ್ನು ಹೊರತೆಗೆದಿದ್ದಾರೆ. ಹಳ್ಳಿಗದ್ದೆಯ ಖಲಂದರ ಫಕ್ರು ಸಾಬ್ (50) ಹಾಗೂ ಆತನ ಮಗ ತನ್ವೀರ್ ಕಲಂದರ್ ಸಾಬ್ (21) ಮೃತರು. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಹೋದರಿಯನ್ನು ಭೇಟಿಯಾಗಲೆಂದು ತೆರಳಿದವ ಬೈಕ್ ಅಪಘಾತದಲ್ಲಿ ಸಾವು.

    ಸಹೋದರಿಯನ್ನು ಭೇಟಿಯಾಗಲೆಂದು ತೆರಳಿದವ ಬೈಕ್ ಅಪಘಾತದಲ್ಲಿ ಸಾವು.

    ಯಲ್ಲಾಪುರ : ಕಾರವಾರದಿಂದ ಮುಂಡಗೋಡಿಗೆ ತೆರಳುತ್ತಿದ್ದ ಬೈಕ್ ಸವಾರನೋರ್ವನಿಗೆ ಟ್ಯಾಂಕರ್ ಢಿಕ್ಕಿ ಹೊಡೆದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ತಾಲೂಕಿನ ಅರಬೈಲ್ ಸಮೀಪದ ರಾಷ್ಟ್ರೀಯ ಹೆಬ್ಬಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಪರಶುರಾಮ ಬಾರೇಕರ್ ಎನ್ನುವ ವ್ಯಕ್ತಿ ಮೃತಪಟ್ಟಿದ್ದು, ಈತ ಕಾರವಾರದಲ್ಲಿ ಹೋಮ್‌ ಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಈತ ತನ್ನ ಸಹೋದರಿಯನ್ನು ಭೇಟಿಯಾಗಲೆಂದು ಕಾರವಾರದಿಂದ ಮುಂಡಗೋಡಿಗೆ ತೆರಳುತ್ತಿದ್ದ ವೇಳೆ ಯಲ್ಲಾಪುರದಿಂದ ಅಂಕೋಲಾ ಕಡೆಗೆ ಬರುತ್ತಿದ್ದ ಡಾಂಬರ್ ಟ್ಯಾಂಕರ್‌ಗೆ ಬೈಕ್ ಢಿಕ್ಕಿಯಾಗಿದೆ. ಯಲ್ಲಾಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅನಂತ ಮೂರ್ತಿ ಟ್ರಸ್ಟ್ ವತಿಯಿಂದ ಉಚಿತ ಕೊನೆ ಗೌಡರ ಜೀವೇವಿಮೆ ಕಾರ್ಯ : ಯಲ್ಲಾಪುರ ತಾಲೂಕಿನಲ್ಲಿ ಪ್ರಾರಂಭ

    ಅನಂತ ಮೂರ್ತಿ ಟ್ರಸ್ಟ್ ವತಿಯಿಂದ ಉಚಿತ ಕೊನೆ ಗೌಡರ ಜೀವೇವಿಮೆ ಕಾರ್ಯ : ಯಲ್ಲಾಪುರ ತಾಲೂಕಿನಲ್ಲಿ ಪ್ರಾರಂಭ

    ಯಲ್ಲಾಪುರ:- ತಾಲೂಕಿನ ಮಂಚಿಕೇರಿಯ ಹಾಸಣಗಿ ಸೇವಾ ಸಹಕಾರಿ ಸಂಘದಲ್ಲಿ ಶಿರಸಿಯ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಕೊನೆಗೌಡರಿಗೆ ಜೀವ ವಿಮೆ ಯೋಜನೆಗೆ ಯಲ್ಲಾಪುರ ತಾಲೂಕಾ ಮಟ್ಟದಲ್ಲಿ ಚಾಲನೆ ನೀಡಲಾಯಿತು.

    ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ರಾದ ಟಿ.ವಿ. ಹೆಗಡೆ ಮಾತನಾಡಿ, ಇದೊಂದು ಮಹತ್ವದ ಅತೀ ಅವಶ್ಯ ಕಾರ್ಯಕ್ರಮ, ಯಾರೂ ಕೂಡ ಬೇಕಂತೆ ಮರದಿಂದ ಬೀಳುವುದಿಲ್ಲ, ಅಥವಾ ಬೀಳಲಿ ಅಂತ ತೋಟದ ಮಾಲೀಕರು ಮರ ಹತ್ತಿಸುವುದಿಲ್ಲ, ಅಪಾಯ ಆದಾಗ ರಕ್ಷಣೆ ಅತ್ಯವಶ್ಯ, ಅನಂತ ಮೂರ್ತಿ ಹೆಗಡೆಯವರಿಗೆ ಅಭಿನಂದನೆ, ಮುಂದಿನ ವರ್ಷ ವಿಮೆ ಕಂತನ್ನು ನಾವೇ ತುಂಬಲು ಪ್ರಯತ್ನ ಮಾಡೋಣ ಎಂದರು.

    ನಂತರ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಮಾತನಾಡಿ ಎಲ್ಲರೂ ಸುಖವಾಗಿರಲಿ ಎಂದು ನಾವೇ ಕಂತನ್ನು ಪಾವತಿಸಿ, ಪಾಲಿಸಿ ಪ್ರಾರಂಭ ಮಾಡಿದ್ದೇವೆ, ನನ್ನ ಆದಾಯದ ಒಂದು ಭಾಗ ಹಣವನ್ನು ಸಮಾಜಕ್ಕೆ ಮೀಸಲಿಟ್ಟಿದ್ದೇನೆ. ಸಮಾಜದಲ್ಲಿ ಎಲ್ಲರೂ ಪ್ರೀತಿಯಿಂದ ಅನ್ಯೋನ್ಯವಾಗಿ ಸಹೋದರರಂತೆ ಬದುಕಬೇಕು. ಅನಾಹುತವಾದರೆ ಯಾವುದೇ ಕಾರಣಕ್ಕೂ ಕೊನೆ ಗೌಡರ ಕುಟುಂಬ ಬೀದಿಗೆ ಬರಬಾರದು, ಅವರಿಗೆ ಸಮಸ್ಯೆ ಆಗಬಾರದು. ಅವಘಡ ಆದಾಗ ಅಡಿಕೆ ತೋಟದ ಮಾಲೀಕರಿಗೂ ಕೂಡ ಕೊನೆ ಗೌಡರ ಜೀವನಾಂಶ ಕೊಡುವುದು ಕಷ್ಟವಾಗುತ್ತದೆ, ಅದಕ್ಕೆ ಯಾರಿಗೂ ಸಮಸ್ಯೆ ಬೇಡ ಅಂತ ಪೋಸ್ಟ್ ಆಫೀಸ್ ಮುಖಾಂತರ ಜೀವವಿಮೆ ಪ್ರಾರಂಭ ಮಾಡಿದ್ದೇನೆ. ಇದಕ್ಕೆ ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಪ್ರೇರಣೆ ಎಂದರು. ಮುಂದಿನ‌ ದಿನದಲ್ಲಿ ಯಲ್ಲಾಪುರ ತಾಲೂಕು ಕೊನೆಗೌಡರ ಸಮ್ಮೇಳನ ನಡೆಸಿ ಹಿರಿಯ ಕೊನೆ ಗೌಡರ ಕುಟುಂಬಕ್ಕೆ ಸನ್ಮಾನ ಕಾರ್ಯಕ್ರಮ ನಡೆಸಲಾಗುವುದು ಎಂದರು.

    ಕಾರ್ಯಕ್ರಮವನ್ನು ಸಂಘದ ಕಾರ್ಯದರ್ಶಿ ಗಣಪತಿ ಭಟ್ ನಿರೂಪಿಸಿದರು. ಈ ಸಂಧರ್ಭದಲ್ಲಿ ಇಲ್ಲಿನ 50 ಕ್ಕೂ ಹೆಚ್ಚು ಕೊನೆಗೌಡರಿಗೆ ಜೀವವಿಮೆ ಮಾಡಿಸಲಾಯಿತು.

    ಹೆಚ್ಚಿನ ಮಾಹಿತಿಗಾಗಿ :- 94483 17709

  • ವಿಶ್ವದರ್ಶನ ಸಂಭ್ರಮ ಕಾರ್ಯಕ್ರಮ ಡಿ.16 ರಂದು

    ವಿಶ್ವದರ್ಶನ ಸಂಭ್ರಮ ಕಾರ್ಯಕ್ರಮ ಡಿ.16 ರಂದು

    ಯಲ್ಲಾಪುರ: ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವಿಶ್ವದರ್ಶನ ಸಂಭ್ರಮ ಕಾರ್ಯಕ್ರಮ ಡಿ.16 ರಂದು ಸಂಜೆ 5 ಕ್ಕೆ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಹೇಳಿದರು. ಅವರು ಸಂಸ್ಥೆಯ ಆವಾರದಲ್ಲಿ ಈ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿದರು. ಕಾರ್ಯಕ್ರಮವನ್ನು ಬಂಟ್ವಾಳದ ಶ್ರೀರಾಮ ವಿದ್ಯಾ ಕೇಂದ್ರದ ಮುಖ್ಯಸ್ಥ ಡಾ.ಕಲ್ಲಡ್ಕ ಪ್ರಭಾಕರ ಭಟ್ಟ ಉದ್ಘಾಟಿಸಲಿದ್ದು, ಪ್ರಧಾನ ಭಾಷಣ ಮಾಡಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಕೈಪಿಡಿ ಬಿಡುಗಡೆಗೊಳಿಸಲಿದ್ದಾರೆ. ಸಂಸ್ಕೃತ ಅಧ್ಯಾಪಕಿ, ವಿಧಾನ ಪರಿಷತ್ ಮಾಜಿ ಸದಸ್ಯೆ ಡಾ.ಎಸ್.ಆರ್ ಲೀಲಾ ಹಾಗೂ ಬೆಳ್ಳಂಬರದ ನಾಟಿ ವೈದ್ಯ ಹನುಮಂತ ಗೌಡ ಅವರಿಗೆ ಈ ಬಾರಿಯ ವಿಶ್ವದರ್ಶನ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ವಿವರಿಸಿದರು.

    ಡಾ.ವಿಜಯ ಸಂಕೇಶ್ವರ ಅವರ ಹೆಸರಿನಲ್ಲಿ, ಸಂಕೇಶ್ವರ ಅವರ ಪ್ರೋತ್ಸಾಹ ಹಾಗೂ ಸಹಕಾರದೊಂದಿಗೆ ಮೀಡಿಯಾ ಸ್ಕೂಲ್ ವಿಶ್ವದರ್ಶನ ಸಂಸ್ಥೆಯಲ್ಲಿ ಆರಂಭಿಸಲಾಗಿದೆ. ಎಲ್ಲ ರೀತಿಯ ಆಧುನಿಕ ಸೌಕರ್ಯಗಳನ್ನು ಹೊಂದಿದ್ದು, ಸ್ವಂತ ಕಟ್ಟಡ, ಇನ್ನಷ್ಟು ಹೊಸತನಗಳನ್ನು ಅಳವಡಿಸಿಕೊಳ್ಳುವ ಯೋಜನೆಯಿದೆ ಎಂದರು.


    ಡಾ.ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ ಪ್ರಾಂಶುಪಾಲ ನಾಗರಾಜ ಇಳೆಗುಂಡಿ ಮಾತನಾಡಿ, ವಿಶ್ವವಿದ್ಯಾಲಯದ ಪಠ್ಯಕ್ರಮದ ಜತೆಗೆ ನಮ್ಮದೇ ಆದ ವಿಶೇಷ ಪಠ್ಯಕ್ರಮವನ್ನೂ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತದೆ. ಪತ್ರಿಕೆ, ಟಿವಿ ವರದಿಗಾರಿಕೆ, ವಿಡಿಯೊ ಚಿತ್ರೀಕರಣ, ಎಡಿಟಿಂಗ್, ಪುಟ ವಿನ್ಯಾಸ, ಆ್ಯಂಕರಿಂಗ್ ಸೇರಿದಂತೆ ಎಲ್ಲ ಬಗೆಯ ತರಬೇತಿ ನೀಡಲಾಗುವುದು. ಅಲ್ಲದೇ ಪ್ರಾಯೋಗಿಕ ತರಬೇತಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದೆಂದರು. ಸಂಸ್ಥೆಯ ಮುಖ್ಯ ಶೈಕ್ಷಣಿಕ ಅಧಿಕಾರಿ ಅಜಯ ಭಾರತೀಯ ಇದ್ದರು.

  • ವಿಭೂತಿ ಜಲಪಾತದ ನೀರಿನಲ್ಲಿ ಮುಳುಗುತ್ತಿದ್ದ ಪ್ರವಾಸಿಗನ ರಕ್ಷಣೆ

    ವಿಭೂತಿ ಜಲಪಾತದ ನೀರಿನಲ್ಲಿ ಮುಳುಗುತ್ತಿದ್ದ ಪ್ರವಾಸಿಗನ ರಕ್ಷಣೆ

    ಅಂಕೋಲಾ: ಅಂಕೋಲಾ ತಾಲೂಕಿನ ವಿಭೂತಿ ಜಲಪಾತದ ನೀರಿನಲ್ಲಿ ಮುಳುಗುತ್ತಿದ್ದ ಪ್ರವಾಸಿಗನ ರಕ್ಷಣೆ ಮಾಡಿದ ಘಟನೆ ನಡೆದಿದೆ. ತಮಿಳುನಾಡು ಮೂಲದ ಮೊಹಮ್ಮದ್ ತಾಜುದ್ದೀನ್ (19) ರಕ್ಷಣೆಗೊಳಗಾದ ಪ್ರವಾಸಿಗನಾಗಿದ್ದು, ಈತ ನೀರಿನಲ್ಲಿ ಈಜುತ್ತಿದ್ದ ವೇಳೆ ಮುಳುಗುವ ಹಂತದಲ್ಲಿದ್ದ ಸಮಯದಲ್ಲಿ ಲೈಫ್‌ಗಾರ್ಡ್‌ ಸಿಬ್ಬಂದಿ ವಿಜಯ ನಾಯ್ಕ ರಕ್ಷಣೆ ಮಾಡಿದ್ದಾರೆ.

    65 ವಿದ್ಯಾರ್ಥಿಗಳ ತಂಡ ವಿಭೂತಿ ಜಲಪಾತಕ್ಕೆ ಪ್ರವಾಸಕ್ಕೆಂದು ಬಂದಿದ್ದರು. ದಾಂಡೇಲಿ ಪ್ರವಾಸ ಮುಗಿಸಿ ವಿಭೂತಿ ಫಾಲ್ಸ್‌ಗೆ ಬಂದಿದ್ದ ತಂಡಕ್ಕೆ ನೀರಿನಲ್ಲಿ ಇಳಿಯದಂತೆ ಮೊದಲೇ ಎಚ್ಚರಿಕೆ ನೀಡಿದ್ದರೂ ನೀರಿನಲ್ಲಿ ಇಳಿದ ಪರಿಣಾಮ ಈ ಘಟನೆ ನಡೆದಿದೆ.

  • “ಹಣತೆ ಬೆಳಗಿದ ನಮ್ಮೆಲ್ಲ ಆಲೋಚನೆ ಬೆಳಕಿನ ಸುತ್ತವೇ ಇದೆ’‘ಹಣತೆ ಬೆಳಕಿನಲ್ಲಿ ದೀಪಾವಳಿ ಕವಿಗೋಷ್ಠಿ’ ಉದ್ಘಾಟಿಸಿದ ಗೋವಿಂದ ಹೆಗಡೆ

    “ಹಣತೆ ಬೆಳಗಿದ ನಮ್ಮೆಲ್ಲ ಆಲೋಚನೆ ಬೆಳಕಿನ ಸುತ್ತವೇ ಇದೆ’‘ಹಣತೆ ಬೆಳಕಿನಲ್ಲಿ ದೀಪಾವಳಿ ಕವಿಗೋಷ್ಠಿ’ ಉದ್ಘಾಟಿಸಿದ ಗೋವಿಂದ ಹೆಗಡೆ

    ಯಲ್ಲಾಪುರ: ದೀಪಾವಳಿಯಲ್ಲಿ ಹಣತೆ ಬೆಳಗಿದ್ದೇವೆ ಅಂದರೆ ನಮ್ಮೆಲ್ಲ ಆಲೋಚನೆ, ಆಚರಣೆ ಬೆಳಕಿನ ಸುತ್ತವೇ ಇದೆ. ನಮ್ಮ ಒಳಗನ್ನು ಬೆಳಗಬೇಕಾಗಿದೆ ಎಂದರೆ ಅಲ್ಲಿ ಯಾವ ಯಾವ ರೀತಿಯ ಕತ್ತಲೆಗಳನ್ನು ತುಂಬಿಕೊಂಡಿದ್ದೇವೆ ಎಂದು ಎರಡು ಕ್ಷಣ ಯೋಚಿಸಿದರೆ ಸಾಕು, ಒಳಗನ್ನು ಬೆಳಗಬೇಕಾದ ಅವಶ್ಯಕತೆ ಅರಿವಾಗುತ್ತದೆ. ಈ ಹಿನ್ನೆಲೆಯಲ್ಲಿ ಹಣತೆ ಬಳಗದ ಶ್ರಮ ಸಾರ್ಥಕ ಎಂದು ಹಿರಿಯ ಕವಿ ಡಾ. ಗೋವಿಂದ ಹೆಗಡೆ ಅಭಿಪ್ರಾಯಪಟ್ಟರು. ಹಣತೆ ಸಾಹಿತ್ಯಕ ಸಾಂಸ್ಕೃತಿಕ ಜಗಲಿ ಉತ್ತರ ಕನ್ನಡ ಪಟ್ಟಣದ ಅಡಿಕೆ ಭವನದಲ್ಲಿ ಹಮ್ಮಿಕೊಂಡ ‘ಹಣತೆ ಬೆಳಕಿನಲ್ಲಿ ದೀವಾವಳಿ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ನಾವು ಪ್ರತಿಯೊಬ್ಬರೂ ಅನನ್ಯರು. ನಮ್ಮ ಕವಿತೆಗಳು ಕೂಡ ಹಾಗೆಯೇ ಆಗಬೇಕು. ನಕಲು ಅನುಕರಣೆ ಬೇಡ. ಬರಹಗಾರ ತನ್ನ ಬಾವಕೋಶವನ್ನು ವಿಸ್ತರಿಸಿಕೊಳ್ಳಲು ಸದಾ ಪ್ರಯತ್ನಿಸುತ್ತಿರಬೇಕು. ಹಾಗೆಯೇ ತನ್ನ ಶಬ್ದ ಕೋಶವನ್ನು ಕೂಡ. ಭಾಷೆಯ ತಪ್ಪಾದ ಬಳಕೆಯ ಮೂಲಕ ಮುಕ್ಕಾದ ಕವಿತೆಗಳನ್ನು ಅಪಾಂಗರನ್ನು ಸೃಷ್ಟಿಸುವುದು ಬೇಡ ಎಂದು ಕವಿ ಗೋವಿಂದ ಹೆಗಡೆ ಹೇಳಿದರು.


    ಕವಿ ತನ್ನ ಅಂತರಂಗವನ್ನೇ ಪರಮಾಣುವನ್ನಾಗಿಸಿಕೊಂಡು ಬರೆಯಬೇಕು. ಎಡ, ಬಲ, ನಡು ಪಂಥದ ಗೋಜು, ಇಸಂ ಹೆಸರಿನಲ್ಲಿ ಸಾಹಿತ್ಯದ ಮಿತಿ ಇಟ್ಟುಕೊಳ್ಳಬೇಕಾಗಿಲ್ಲ. ಘೋಷಣೆಯ ಸಾಹಿತ್ಯ ಕಾಲದ ಪರೀಕ್ಷೆಯಲ್ಲಿ ನಿಲ್ಲುವುದು ಕಷ್ಟ ಎಂದು ಹೆಗಡೆ ನುಡಿದರು.


    ಆಶಯ ಮಾತುಗಳನ್ನಾಡಿದ ಹಣತೆ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ, ಕವಿ ಇಂದು ತನ್ನ ಸ್ಥಿತಪ್ರಜ್ಞತ್ವ ಉಳಿಸಿಕೊಂಡು ಬರೆಯುವುದು ಸವಾಲಿನ ಸಂಗತಿಯಾಗಿದೆ. ಜೊತೆಗೆ ತಾನು ಬರೆದ ಕೃತಿಯನ್ನು ಮಾರಾಟ ಮಾಡಲು ಸರಕಾರದತ್ತ ಮುಖ ಮಾಡಿ ಸೋಲುತ್ತಿದ್ದಾನೆ. ಇದರ ಬದಲು ಎಲ್ಲ ಬರಹಗರರು ಸಹಕಾರ ಮನೋಭಾವದೊಂದಿಗೆ ರ‍್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾದ ತುರ್ತು ಇದೆ ಎಂದು ಹೇಳಿದರು.
    ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಯಕ್ಷಗಾನ ಕಲಾವಿದ, ಕವಿ ಗಣಪತಿ ಹೆಗಡೆ ಕೊಂಡದಕುಳಿ, ಸಂಗೀತ, ಸಾಹಿತ್ಯ, ಯಕ್ಷಗಾನ ಎಲ್ಲ ಕಲೆಗಳೂ ಸತ್ಯದ ಹುಡುಕಾಟವೇ ಆಗಿದೆ. ಕವಿ ಬದುಕಿನಲ್ಲಿ ಎಷ್ಟೇ ಕಷ್ಟ ಅನುಭವಿಸಿದರೂ ಆತ ಬರೆದ ಕಾವ್ಯ ಸಮಾಜಕ್ಕೆ ಸುಖವನ್ನೇ ಕೊಡುತ್ತದೆ ಎಂದರು.


    ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಿ ವನರಾಗ ಶರ್ಮ ಬರಹಗಾರ ಸೃಷ್ಟಿತತ್ವ ಮರೆಯದೇ ತನ್ನೊಳಗನ್ನು ಹೊರಹಾಕಲು ಪ್ರಯತ್ನಿಸಬೇಕು. ಅಂದಾಗ ಮಾತ್ರ ಅದು ಎಲ್ಲರನ್ನೂ ಮುಟ್ಟುತ್ತದೆ, ತಟ್ಟುತ್ತದೆ. ರಾಜ್ಯದಲ್ಲಿಯೇ ಮೊಟ್ಟಮೊದಲ ಬಾರಿಗೆ ‘ಹಣತೆ’ ಸಂಘಟನೆ ರಮ್ಜಾನ್, ದೀಪಾವಳಿ, ಕ್ರಿಸ್ಮಸ್ ಕವಿಗೋಷ್ಠಿಯನ್ನು ಮಾಡುತ್ತಿರುವುದು ತುಂಬ ಅರ್ಥಪೂರ್ಣ ಎಂದರು.


    ಕವಿಗೋಷ್ಠಿಯಲ್ಲಿ ಸಿಂಧುಚಂದ್ರ ಶಿರಸಿ, ಶೋಭಾ ನಾಯ್ಕ ಹಿರೇಕೈ, ಸುರೇಶ ಕಡೆಮನಿ, ಗಣಪತಿ ನಾಯ್ಕ ಗೇರಸೊಪ್ಪ, ಸುಮಂಗಲ ಚಕ್ರಸಾಲಿ, ಕಮಲಾ ಕೊಂಡದಕುಳಿ, ಸುಬ್ರಾಯ ಬಿದ್ರಮನೆ, ದತ್ತಾತ್ರೇಯ ಹೆಗಡೆ ಕಣ್ಣಿಪಾಲ, ಪ್ರತಿಮಾ ಕೋಮಾರ್, ಅಬ್ದುಲ್ ರೆಹಮಾನ್, ಗಾಯತ್ರಿ ರಾಘವೇಂದ್ರ, ಸಣ್ಣಪ್ಪ ಭಾಗವತ, ಸುಚೇತನಾ ನಾಗರಾಜ ಮದ್ಗುಣಿ, ರಾಘವೇಂದ್ರ ಟಿ. ನಾಯ್ಕ, ಪೂನಂ ಧಾರವಾಡಕರ್, ರಾಘವೇಂದ್ರ ಗಡೆಪ್ಪನವರ್ ಮುಂತಾದವರು ಕವನ ವಾಚನ ಮಾಡಿದರು.


    ವೇದಿಕೆಯಲ್ಲಿ ಹಣತೆ ಜಿಲ್ಲಾ ಸಂಚಾಲಕ ಎನ್. ಜಯಚಂದ್ರನ್, ಕಾರ್ಯಕಾರಿ ಸದಸ್ಯ ಉಪೇಂದ್ರ ಘೋರ್ಪಡೆ, ದಾಂಡೇಲಿ ಘಟಕದ ಅಧ್ಯಕ್ಷ ರಘವೇಂದ್ರ ಗಡೆಪ್ಪನವರ್ ಉಪಸ್ಥಿತರಿದ್ದರು. ಹಣತೆ ಯಲ್ಲಾಪುರ ಘಟಕದ ಅಧ್ಯಕ್ಷ ರಾಘವೇಂದ್ರ ಹೊನ್ನಾವರ ಸ್ವಾಗತಿಸಿದರು, ಪದ್ಮಾ ಪಟಗಾರ ವಂದಿಸಿದರು.

  • ‘ಹಣತೆ’ ಬೆಳಕಿನಲ್ಲಿ ದೀಪಾವಳಿ ಕವಿಗೋಷ್ಠಿ ನ. 19 ಕ್ಕೆ.

    ‘ಹಣತೆ’ ಬೆಳಕಿನಲ್ಲಿ ದೀಪಾವಳಿ ಕವಿಗೋಷ್ಠಿ ನ. 19 ಕ್ಕೆ.

    ಯಲ್ಲಾಪುರ: ‘ಹಣತೆ’ ಬೆಳಕಿನಲ್ಲಿ ದೀಪಾವಳಿ ಕವಿಗೋಷ್ಠಿಯನ್ನು ಹಣತೆ ಸಾಹಿತ್ಯಕ, ಸಾಂಸ್ಕೃತಿಕ ಜಗಲಿ ಉತ್ತರ ಕನ್ನಡ ವತಿಯಿಂದ ನ.19 ಭಾನುವಾರದಂದು ಮಧ್ಯಾಹ್ನ 3 ಗಂಟೆಗೆ ಪಟ್ಟಣದ ಎ.ಪಿ.ಎಂ.ಸಿ.ಯ ಅಡಿಕೆ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಹಣತೆ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಆಶಯ ನುಡಿಗಳನ್ನು ಆಡಲಿದ್ದು, ಹಿರಿಯ ಕವಿ ಡಾ. ಗೋವಿಂದ ಹೆಗಡೆ ಕವಿಗೋಷ್ಠಿ ಉದ್ಘಾಟಿಸಲಿದ್ದಾರೆ. ಹಿರಿಯ ಕವಿ ವನರಾಗ ಶರ್ಮ ಅಧ್ಯಕ್ಷತೆ ವಹಿಸಲಿದ್ದಾರೆ. ಯಕ್ಷಗಾನ ಕಲಾವಿದ, ಕವಿ ಗಣಪತಿ ಹೆಗಡೆ ಕೊಂಡದಕುಳಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.


    ಕವಿಗೋಷ್ಠಿಯಲ್ಲಿ ಸಿಂಧುಚಂದ್ರ ಶಿರಸಿ, ಶೋಭಾ ನಾಯ್ಕ ಹಿರೇಕೈ, ಸುರೇಶ ಕಡೆಮನಿ, ನಾಗಪತಿ ಹೆಗಡೆ ಹುಳಗೋಡ, ಗಣಪತಿ ನಾಯ್ಕ ಗೇರಸೊಪ್ಪ, ಸುಮಂಗಲಾ ಚಕ್ರಸಾಲಿ, ಕಮಲಾ ಕೊಂಡದಕುಳಿ, ಸುಬ್ರಾಯ ಬಿದ್ರಮನೆ, ಶ್ರೀಧರ ಅಣಲಗಾರ, ವಿನಯ ಪಾಲನಕರ, ಶಿವಲೀಲಾ ಹುಣಸಗಿ, ದತ್ತಾತ್ರೇಯ ಹೆಗಡೆ ಕಣ್ಣಿಪಾಲ್, ಪ್ರತಿಮಾ ಕೋಮಾರ, ಅಬ್ದುಲ್ ರೆಹಮಾನ್, ಗಾಯತ್ರಿ ರಾಘವೇಂದ್ರ, ದತ್ತಗುರು ಕಂಠಿ, ಮಂಜುನಾಥ ಎನ್.ವಿ., ಷರೀಫ್ ಹಾರ್ಸಿಕಟ್ಟಾ, ಸಣ್ಣಪ್ಪ ಭಾಗವತ್, ಗಂಗಾಧರ ಎಸ್. ದಿನೇಶ ಗೌಡ ಮಲವಳ್ಳಿ, ರಾಘವೇಂದ್ರ ನಾಯ್ಕ ಮುಂತಾದವರು ಪಾಲ್ಗೊಳ್ಳಲಿದ್ದಾರೆ ಎಂದು ‘ಹಣತೆ’ ಯಲ್ಲಾಪುರ ತಾಲೂಕು ಘಟಕದ ಅಧ್ಯಕ್ಷ ರಾಘವೇಂದ್ರ ಹೊನ್ನಾವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಹಣತೆ ಜಿಲ್ಲಾ ಘಟಕವು ಪ್ರತಿಬಾರಿ ಭಾವೈಕ್ಯದ ನೆಲೆಯಲ್ಲಿ ರಮ್ಜಾನ್ ಕವಿಗೋಷ್ಠಿ, ದೀಪಾವಳಿ ಕವಿಗೋಷ್ಠಿ, ಕ್ರಿಸ್‌ಮಸ್ ಕವಿಗೋಷ್ಠಿ ಹಮ್ಮಿಕೊಳ್ಳುವ ಯೋಜನೆ ಘೋಷಿಸಿದಂತೆ, ಕಳೆದ ಎಪ್ರಿಲ್ ನಲ್ಲಿ ರಮ್ಜಾನ್ ಕವಿಗೋಷ್ಠಿಯನ್ನೂ, ಇದೀಗ ದೀಪಾವಳಿ ಕವಿಗೋಷ್ಠಿ ಮತ್ತು ಡಿಸೆಂಬರ್ ನಲ್ಲಿ ಕ್ರಿಸ್‌ಮಸ್ ಕವಿಗೋಷ್ಠಿ ಹಮ್ಮಿಕೊಳ್ಳಲಿದೆ ಎಂದು ರಾಘವೇಂದ್ರ ಹೊನ್ನಾವರ ತಿಳಿಸಿದ್ದಾರೆ.