Home Food ದೇಶವಿಖ್ಯಾತ ವಾಲಗಳ್ಳಿ “ಮೆಟ್ಟು”

ದೇಶವಿಖ್ಯಾತ ವಾಲಗಳ್ಳಿ “ಮೆಟ್ಟು”

 

 

ಗೌರೀಶ ಶಾಸ್ತ್ರಿ, ನಾಜಗಾರ

9483346427

gourish

ಕಾಲ ಒಂದು ಚಕ್ರದಂತೆ. ಒಮ್ಮೆ ಮರೆಸುತ್ತದೆ. ಇನ್ನೊಮ್ಮೆ ಮರೆಸುತ್ತದೆ. ಭೂಮಿಯ ಮೇಲೆ ಮೆರೆದ ನಗರ ಮಣ್ಣಿನಡಿಯ ಇತಿಹಾಸವಾಗುತ್ತದೆ. ಇಂತಹ ಇತಿಹಾಸ ಪುಟಸೇರಿದ ಚರಿತ್ರೆಗಳಲ್ಲಿ ಅವೆಷ್ಟೋ ರೋಮಾಂಚಕ ಘಟನೆಗಳು ಇಂದಿಗೂ ನೆನಪಿನ ಬುತ್ತಿಗಳಾಗಿವೆ. ಅಂತಹ ಬುತ್ತಿ ಬಿಚ್ಚಿದಾಗ ಬೆಚ್ಚಿಬೀಳಿಸುವ ಕುಮಟಾ ತಾಲೂಕಿನ ವಾಲಗಳ್ಳಿಯ “ಮೆಟ್ಟಿ”ನ ಕತೆ! “ಮೆಟ್ಟಿ”ನ ಕತೆ ಇತಿಹಾಸ ಸೇರಿದಂತೆ, “ಮೆಟ್ಟು” ಶಬ್ದದ ಅರ್ಥವೂ ಈಗ ಅರ್ಥಕೋಶ ಸೇರಿದೆ. ಚರ್ಮದಿಂದ ತಯಾರಿಸಿದ ಪಾದರಕ್ಷೆ ಅಥವಾ ಚಪ್ಪಲಿಯ ಶುದ್ಧ ಕನ್ನಡ ಪದ “ಮೆಟ್ಟು” ಇಂತಹ ಪಾದರಕ್ಷೆಯ  ತಯಾರಿಯಲ್ಲಿ ವಾಲಗಳ್ಳಿಯ ಹೆಸರು ಒಂದು ಕಾಲದಲ್ಲಿ ಬಹು ವಿಖ್ಯಾತವಾಗಿತ್ತು.

ಹತ್ತೊಂಭತ್ತನೇ ಶತಮಾನದ ಪೂರ್ವಾರ್ಧದಲ್ಲಿ ವಾಲಗಳ್ಳಿಯ “ಮೆಟ್ಟು” ರಾಜ್ಯ ಮಟ್ಟದ ಖ್ಯಾತಿಗಳಿಸಿತ್ತೆಂದರೆ ಈಗ ನಂಬುವದು ಕಷ್ಟವಾದೀತು. ಆದರೆ “ಚರ ಪರ” ಎಂದು ಸದ್ದು ಮಾಡುವ ಈ ಚಪ್ಪಲಿಯನ್ನು ಮೆಟ್ಟಿ ನಡೆಯುವದು ಒಂದು “ಪ್ರೆಸ್ಟೀಜು” ಆಗಿತ್ತು. ಆಢ್ಯಸ್ಥರು ಸಮಾಜದ ಗಣ್ಯರು ಈ “ಮೆಟ್ಟು” ಧರಿಸುತ್ತಿದ್ದರು!

ಅಂದು ವಾಲಗಳ್ಳಿ (ವಾಲಗದ ಹಳ್ಳಿ) ಆನುವಂಶಿಕವಾಗಿ ಚರ್ಮ ಕಲೆಯಲ್ಲಿ ನುರಿತ ಅನೇಕ ವೃತ್ತಿನಿಷ್ಠ ವೈಕ್ತಿಗಳಿಂದ ಕೂಡಿತ್ತು. ಸುಮಾರು ಮೂತ್ತರಷ್ಟು ಕುಟುಂಬಗಳು 1950ರ ತನಕ ಇಂತಹ ಚಪ್ಪಲಿ ತಯಾರಿಕೆಯಿಂದ ಜೀವನ ಸಾಗಿಸುತ್ತಿದ್ದುದು ಕಂಡುಬರುತ್ತದೆ. ಇವರೆಲ್ಲರೂ ವೃತ್ತಿನಿರತರಾಗಿ ಗೌರವಾನ್ವಿತರಾಗಿ ಬದುಕಿದ್ದರು. ಇಲ್ಲಿ ಆಗ ಚರ್ಮ ಹದ ಮಾಡಲು ನಿರ್ಮಿಸಿದ ಹೊಂಡಗಳು-ಇಂದಿಗೂ ಇತಿಹಾಸದ ಪುಟಗಳಂತೆ ಇಲ್ಲಿ ದಾಖಲೆ ಒದಗಿಸುತ್ತವೆ. ಇಲ್ಲಿ ವಿಶಿಷ್ಟ ರಾಸಾಯನಿಕ ಬೆರೆಸಿ ಹದಮಾಡಿದ ಚರ್ಮದಿಂದ ತಯಾರಾದ ಚಪ್ಪಲಿ ಪೂನಾ,ಮುಂಬಯಿಗಳಿಗೂ ಹೊಗುತ್ತಿದ್ದವು. ಅನೇಕ ಶ್ರೀಮಂತ ಆಢ್ಯಸ್ಥರು ತಮ್ಮ ಕಾಲಿನ ಅಳತೆಯನ್ನು ಇಲ್ಲಿಗೆ ಕಳಿಸಿ ಚಪ್ಪಲಿ ತಯಾರಿಸಿಕೊಂಡು ತರಿಸಿಕೊಳ್ಳುತ್ತಿದ್ದರು. 1950ರ ನಂತರ ಕಂಪನಿ ಚಪ್ಪಲಿಗಳ ಹಾವಳಿ ಆರಂಭವಾದಗ ಇವರಿಗೆ ಚರ್ಮದ ಕೊರತೆ ಜತೆಗೆ ಸ್ಪರ್ಧಾತ್ಮಕ ಪೈಪೋಟಿ ಎದುರಾದವು. ಕಾರಣ ಜೀವನೋಪಾಯಕ್ಕಾಗಿ ಬೇರೆ-ಬೇರೆ ಊರುಗಳನ್ನು ಸೇರಬೇಕಾಯಿತು. ಇಂತಹ ಅನೇಕ ಕುಲ ಕಸುಬುಗಳ ಜತೆ ಇದೂ ಕೂಡ ಕಂಪನಿಗಳ ಯಂತ್ರಗಳಿಗೆ ಸಿಲುಕಿ ನುಚ್ಚು ನೂರಾದವು! ಆ ಕಾಲದಲ್ಲಿ ವಾಲಗಳ್ಳಿಯ ಒಂದು ಮಹಾರಾಜ ಚಪ್ಪಲಿ ಜೊತೆಗೆ ನೂರು ರೂಪಾಯಿ ಬೆಲೆ ಇತ್ತಂತೆ! ಈ ಚಪ್ಪಲಿ ಬೇಸಿಗೆಯಲ್ಲಿ ತೊಡಲು ತುಂಬ ಹಿತಕರವಾಗಿರುತ್ತಿದ್ದವಲ್ಲದೆ ಪಾದಕ್ಕೂ ತುಂಬಾ ತಂಪಿನ ಹಿತಾನುಭವ ಉಂಟು ಮಾಡುತ್ತಿದ್ದವು. ಇವರು ಸುಮಾರುಹದಿನೈದು ರೀತಿಯ ವಿವಿಧ ವಿನ್ಯಾಸಗಳ ಚಪ್ಪಲಿಯನ್ನು ತಯಾರಿಸುತ್ತಿದ್ದರು. ಚಿಕ್ಕ ಮಕ್ಕಳಿಗೆ ಮತ್ತು ಮಹಿಳೆಯರಿಗಾಗಿಯೇ ನಿರ್ಮಿಸುವ “ವಾಲಗಳ್ಳಿ ಚಪ್ಪಲಿ” ವಿಶೇಷಜ್ಞರು ಇಲ್ಲಿದ್ದರೆಂಬುದು ವಿಶೇಷ.

ಆದರೆ ಇಂದು ಇಲ್ಲಿಯ ಈ ಪ್ರಸಿದ್ಧ ಕಸುಬು ಕಸದ ಬುಟ್ಟಿ ಸೇರಿದೆ. ಈಗ ಇಲ್ಲಿ ಕೇವಲ ಒಂದೆರಡು ಕುಟುಂಬಗಳಷ್ಟೇ ಉಳಕೊಂಡಿದ್ದರು. ಅವರಿಗೆ ಈ ಕಸುಬು ಕೇವಲ ಹವ್ಯಾಸವಷ್ಟೇ ಆಗುಳಿದೆಯೆಂದು ವಾಲಗಳ್ಳಿ ಮೆಟ್ಟಿನ ಕೊನೆಯ ಮೆಟ್ಟಿಲಿನಂತಿರುವ ಮಂಜಪ್ಪನ ಅಳಲು.